ನವದೆಹಲಿ:ದೆಹಲಿ ಗಡಿಗಳಲ್ಲಿ ನಡೆಯುತ್ತಿರುವರೈತರ ಪ್ರತಿಭಟನೆಗೆ ಪ್ರಚೋದನೆ ನೀಡುವ "ಟೂಲ್ಕಿಟ್" ಹರಡುವಲ್ಲಿ ಪಾತ್ರ ವಹಿಸಿದ್ದಕ್ಕಾಗಿ ದೆಹಲಿ ಸೈಬರ್ ಸೆಲ್ ಪೊಲೀಸರು ಬೆಂಗಳೂರಿನ 21 ವರ್ಷದ ಯುವತಿಯನ್ನು ಶನಿವಾರ ಬಂಧಿಸಿದ್ದಾರೆ.
ಬಂಧಿತ ದಿಶಾ ರವಿ ಎಂಬಾಕೆ ಬೆಂಗಳೂರಿನಲ್ಲಿ ನೆಲೆಸಿದ್ದು, ಈಕೆ ಪರಿಸರ ಕಾರ್ಯಕರ್ತೆಯಾಗಿದ್ದಾಳೆ (climate activist) ಎನ್ನಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಗಲಭೆಗೆ ಪ್ರಚೋದನೆ ನೀಡುವ ಟೂಲ್ಕಿಟ್ ಪ್ರಚಾರ ಮಾಡುವಲ್ಲಿ ಈಕೆ ಪ್ರಮುಖ ಪಾತ್ರ ವಹಿಸಿದ್ದಳು ಎಂದು ತಿಳಿದು ಬಂದಿದೆ.
ದೆಹಲಿ ಪೊಲೀಸ್ ಅಧಿಕಾರಿಗಳ ಪ್ರಕಾರ, ಟೂಲ್ಕಿಟ್ ಪ್ರಕರಣದಲ್ಲಿ ದಿಶಾ ಪ್ರಮುಖ ಪಾತ್ರ ವಹಿಸಿದ್ದಾಳೆ. ಆರಂಭಿಕ ವಿಚಾರಣೆಯ ಸಮಯದಲ್ಲಿ ದಿಶಾ ಸ್ವತಃ ಈ ವಿಚಾರವನ್ನು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದೆಹಲಿ ಪೊಲೀಸರ ವಿಶೇಷ ಸೆಲ್, ದಿಶಾಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಿದೆ. ದಿಶಾ ಬಂಧನದ ನಂತರ ಟೂಲ್ಕಿಟ್ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳ ಬಂಧನವಾಗುವ ಸಾಧ್ಯತೆಗಳಿವೆ.