ನವದೆಹಲಿ: ದೇಶದೆಲ್ಲೆಡೆ ಟೊಮೆಟೊ ಬೆಲೆ 100ರ ಗಡಿ ದಾಟಿದೆ. ಪೆಟ್ರೋಲಿಗಿಂತಲೂ ದುಬಾರಿಯಾಗಿರುವ ಟೊಮೆಟೊ ಲಭ್ಯತೆ ಕೂಡ ಗಣನೀಯವಾಗಿ ಕಡಿಮೆಯಾಗಿರುವುದು ಅಭಾವಕ್ಕೆ ಕಾರಣವಾಗಿದೆ. ಈ ಟೊಮೆಟೊ ಬೆಲೆ ಏರಿಕೆ ಜೊತೆ ಅಭಾವ ಸೃಷ್ಟಿಯಾಗಿರುವ ಹಿನ್ನೆಲೆ ಟೊಮೆಟೊ ಪ್ರಿಯರು ನಿರಾಶೆಗೊಂಡಿರುವುದು ಸುಳ್ಳಲ್ಲ. ಇದೀಗ ಈ ನಿರಾಶೆ ಸರದಿ ಮೆಕ್ಡೊನಾಲ್ಡ್ ಪ್ರಿಯರಿಗೂ ಆಗಲಿದೆ. ಕಾರಣ ಟೊಮೆಟೊ ಲಭ್ಯತೆ ಕಡಿಮೆಯಾಗಿರುವ ಹಿನ್ನೆಲೆ ದೆಹಲಿ ಸೇರಿದಂತೆ ಪ್ರಮುಖ ರಾಜ್ಯಗಳ ಮೆಕ್ಡೊನಾಲ್ಡ್ ಕೇಂದ್ರದಲ್ಲಿ ಟೊಮೆಟೊವನ್ನು ತಮ್ಮ ತಿನಿಸುಗಳಿಗೆ ಬಳಸಲು ಸಾಧ್ಯವಾಗುತ್ತಿಲ್ಲ. ಗ್ರಾಹಕರು ಸಹಕರಿಸಲು ಕೋರಿ ಕೇಂದ್ರಗಳು ನೋಟಿಸ್ ಅನ್ನು ಅಂಗಡಿ ಮುಂದೆ ಅಂಟಿಸಿವೆ.
ಪ್ರಿಯ ಗ್ರಾಹಕರೆ, ನಾವು ನಿಮಗೆ ಉತ್ತಮ ಸೇವೆ ಮತ್ತು ಉತ್ತಮ ಸಾಮಗ್ರಿಗಳ ಆಹಾರಗಳನ್ನು ನೀಡುವ ಬದ್ಧತೆ ಹೊಂದಿದ್ದೇವೆ. ನಮ್ಮ ವಿಶ್ವ ದರ್ಜೆಯ ಗುಣಮಟ್ಟದ ತಪಾಸಣೆಗೆ ಒಳಗಾಗಿರುವ ಸಾಕಷ್ಟು ಪ್ರಮಾಣದ ಟೊಮೆಟೊಗಳನ್ನು ಪಡೆಯಲು ನಮಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ನಾವು ಟೊಮೆಟೊ ಇಲ್ಲದೇ ಆಹಾರ ನೀಡಬೇಕಾಗಿ ಬಂದಿದೆ. ಟೊಮೆಟೊ ಸರಬರಾಜು ಪೂರೈಕೆಗೆ ನಾವು ಪ್ರಯತ್ನಿಸುತ್ತೇವೆ. ಇದು ತಾತ್ಕಾಲಿಕ ಸಮಸ್ಯೆಯಾಗಿದೆ ಮತ್ತು ಶೀಘ್ರದಲ್ಲೇ ನಮ್ಮ ಮೆನುಗೆ ಟೊಮೆಟೊ ಸೇರಿಸುತ್ತೇವೆ. ಈ ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ದೆಹಲಿಯ ಮೆಕ್ಡೊನಾಲ್ಡ್ ಅಂಗಡಿ ಮುಂದೆ ಫಲಕವನ್ನು ಹಾಕಲಾಗಿದೆ.
ಇನ್ನು ಈ ಫಲಕವೂ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಟ್ವೀಟ್ ಆಗಿದ್ದು ವೈರಲ್ ಕೂಡ ಆಗಿದೆ. ದೆಹಲಿಯ ಮೆಕ್ಡೊನಾಲ್ಡ್ಗಳಲ್ಲಿ ಮಾತ್ರ ಈ ಟೊಮೆಟೊ ಬಳಕೆ ಅಭಾವ ಎದುರಾಗಿದ್ದು, ಪಂಜಾಬ್ ಸೇರಿದಂತೆ ಹಲವೆಡೆ ಟೊಮೆಟೊವನ್ನು ಬಳಕೆ ಮಾಡುವುದಾಗಿ ಫಾಸ್ಟ್ ಫುಡ್ ಸಂಸ್ಥೆ ತಿಳಿಸಿದೆ.