ಸೋಲನ್ : ಹಿಮಾಚಲ ಪ್ರದೇಶದಲ್ಲಿ ಸತತ 3 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದೇ ವೇಳೆ ರೈತರ ಬೆಳೆಗಳಿಗೂ ಹಾನಿಯಾಗಿದೆ. ಈ ದಿನಗಳಲ್ಲಿ ದೇಶಾದ್ಯಂತ ಹಿಮಾಚಲದಿಂದ ಟೊಮೆಟೊ ಪೂರೈಕೆಯಾಗುತ್ತಿದೆ. ಇದರಿಂದ ರೈತರಿಗೂ ಉತ್ತಮ ಬೆಲೆ ಸಿಕ್ಕಿತ್ತು. ಆದರೆ ಕಳೆದ 3 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಬೆಳೆಗಳು ಹಾನಿಗೀಡಾಗಿವೆ.
ಮಾರುಕಟ್ಟೆಗೆ ಆಗಮಿಸುತ್ತಿರುವ ರೈತರ ಬೆಳೆಗೆ ಉತ್ತಮ ಬೆಲೆ : ತರಕಾರಿ ಮಾರುಕಟ್ಟೆ ಸೋಲನ್‌ನಲ್ಲಿ ಟೊಮೆಟೊ ಪೂರೈಕೆ ಕಡಿಮೆಯಾಗಿದೆ. ದೇಶಾದ್ಯಂತ ದೊಡ್ಡ ಮಂಡಿಗಳಲ್ಲಿ ಟೊಮೆಟೊಗೆ ಬೇಡಿಕೆ ಹೆಚ್ಚಾಗಿದೆ. ಕಲ್ಕಾ ಶಿಮ್ಲಾ ಎನ್‌ಎಚ್ 5ರಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿರುವುದರಿಂದ ಪಂಜಾಬ್, ರಾಜಸ್ಥಾನ, ಬೆಂಗಳೂರು, ಹರಿಯಾಣದ ತರಕಾರಿ ಮಾರುಕಟ್ಟೆ ಏಜೆಂಟ್‌ಗಳು ಸೋಲನ್‌ಗೆ ತಲುಪಲು ಸಾಧ್ಯವಾಗುತ್ತಿಲ್ಲ. ಇದೇ ರೀತಿ ಹಿಮಾಚಲ ಪ್ರದೇಶದಲ್ಲಿ, ರೈತರು ಟೊಮೆಟೊ ಬೆಳೆಯನ್ನು ಮಂಡಿಗಳಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಬೇಡಿಕೆ ಹೆಚ್ಚಿರುವ ಕಾರಣ ಟೊಮೆಟೊ ಬೆಳೆದಿರುವ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ಸಬ್ಜಿ ಮಂಡಿ ಸೋಲನ್‌ನಲ್ಲಿ ಮಂಗಳವಾರ ಟೊಮೆಟೊ ಬೆಲೆ ಒಂದು ಕ್ರೇಟ್‌ಗೆ ಸುಮಾರು ₹ 2000 ರಿಂದ ₹ 3300 ರವರೆಗೆ ಸಿಕ್ಕಿದೆ. ಒಂದು ಕ್ರೇಟ್ ಎಂದರೆ 24 ರಿಂದ 25 ಕೆಜಿಯ ಒಂದು ಬಾಕ್ಸ್.
ಮುಂದಿನ ದಿನಗಳಲ್ಲಿ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳ: ಸಬ್ಜಿ ಮಂಡಿ ಸೋಲನ್‌ನಲ್ಲಿ ಟೊಮೆಟೊ ವ್ಯಾಪಾರ ಮಾಡುತ್ತಿರುವ ಜಗದೀಶ್ ಮಾತನಾಡಿ, 'ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ರೈತರಿಗೆ ಉತ್ತಮ ಬೆಲೆ ಸಿಕ್ಕಿದೆ. ಕಳೆದ 3 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಟೊಮೆಟೊ ಬೆಳೆ ಹೊಲದಲ್ಲೇ ಹಾಳಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಟೊಮೆಟೊ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಒಂದು ಕ್ರೇಟ್‌ಗೆ ₹ 4000 ವರೆಗೆ ರೈತರಿಗೆ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಏಕೆಂದರೆ ಹೊರ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚು ಮತ್ತು ಈಗ ಬೆಳೆ ಕಡಿಮೆಯಿರುವುದರಿಂದಾಗಿ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.