ನವದೆಹಲಿ:ಹವಾಮಾನ, ಉತ್ಪಾದನೆ ಕುಸಿತ ಸೇರಿದಂತೆ ನಾನಾ ಕಾರಣಗಳಿಂದ ಟೊಮೆಟೊ ದರ ಗಗನಮುಖಿಯಾಗಿದೆ. ಮಧ್ಯಪ್ರದೇಶ, ಮಹಾರಾಷ್ಟ್ರಗಳಿಂದ ಹೊಸ ಬೆಳೆ ಬರಲಿದ್ದು, ಶೀಘ್ರದಲ್ಲೇ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸಂಸತ್ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಈ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವ ಅಶ್ವಿನಿ ಕುಮಾರ್ ಅವರು, ಪ್ರಸ್ತುತ ಹೆಚ್ಚುತ್ತಿರುವ ಟೊಮೆಟೊ ದರವನ್ನು ಪರಿಶೀಲಿಸಿ ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲು ಸರ್ಕಾರವು ಬೆಲೆ ಸ್ಥಿರೀಕರಣ ನಿಧಿಯಡಿ ಟೊಮೆಟೊ ಖರೀದಿಯನ್ನು ಆರಂಭಿಸಿದೆ. ಗ್ರಾಹಕರಿಗೆ ಹೆಚ್ಚಿನ ಸಬ್ಸಿಡಿ ದರದಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ. 80 ರೂಪಾಯಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ಮತ್ತು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ಎನ್‌ಎಎಫ್‌ಇಡಿ)ಗಳು ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದ ಮಂಡಿಗಳಿಂದ ನಿರಂತರವಾಗಿ ಟೊಮೆಟೊವನ್ನು ಖರೀದಿಸುತ್ತಿದೆ. ಇದನ್ನು ಬಿಹಾರ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಜುಲೈ 16 ರಂದು ಕೆಜಿಗೆ 80 ರೂ. ರಿಯಾಯಿತಿ ದರದಲ್ಲಿ ಸರ್ಕಾರ ಮಾಡಲಾಗಿತ್ತು. ಜುಲೈ 20 ರಂದು ಅದನ್ನು 70 ರೂ.ಗೆ ಇಳಿಸಲಾಗಿತ್ತು. ಟೊಮೆಟೊ ಆರಂಭದಲ್ಲಿ ಕೆಜಿಗೆ 90 ರೂ.ಗೆ ಚಿಲ್ಲರೆ ದರದಲ್ಲಿ ವಿಲೇವಾರಿ ಮಾಡಲಾಗಿತ್ತು. ಟೊಮೆಟೊಗೆ ಅಧಿಕ ಬೇಡಿಕೆ ಮತ್ತು ಹೆಚ್ಚಿನ ದರ ಇರುವ ಕಾರಣ ಮುಂಬರುವ ದಿನಗಳಲ್ಲಿ ಈ ಬೆಳೆಯನ್ನು ಹೆಚ್ಚು ಬೆಳೆಯಲು ರೈತರಿಗೆ ಉತ್ತೇಜನ ನೀಡಲಿದೆ ಎಂದು ಹೇಳಿದರು.
ಬೆಳೆ ಉಳಿಸಲು ಯೋಜನೆ;ಕೃಷಿ- ತೋಟಗಾರಿಕಾ ಬೆಳೆಗಳು ಕೆಡದಂತೆ, ಕೊಳೆಯದಂತೆ ತಡೆಯಲು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು (ಡಿಎಎಫ್‌ಡಬ್ಲ್ಯು) ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ (ಎಂಐಎಸ್) ಯನ್ನು ಜಾರಿಗೆ ತಂದಿದೆ. ರೈತರು ಬೆಳೆದ ಉತ್ಪನ್ನಗಳು ಕೊಳೆಯುವುದರಿಂದ ಕಾಪಾಡಲು, ರೈತರಿಗೆ ರಕ್ಷಣೆ ನೀಡಲು ಗ್ರೀನ್ ಯೋಜನೆಗೆ ಮುಂದಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪ್ರಮುಖ ಮಹಾನಗರಗಳಲ್ಲಿ ಟೊಮೆಟೊ ಬೆಲೆ :ಪ್ರಮುಖ ಮಹಾನಗರಗಳಲ್ಲಿ ಟೊಮೆಟೊ ದರ ನೋಡುವುದಾರೆ, ದೆಹಲಿಯಲ್ಲಿ ಕೆಜಿಗೆ 178 ರೂ. ಇದ್ದು, ಮುಂಬೈನಲ್ಲಿ ಕೆಜಿಗೆ 150 ರೂ. ಮತ್ತು ಚೆನ್ನೈನಲ್ಲಿ ಕೆಜಿಗೆ 132 ರೂ. ಇದೆ. ಹಾಪುರದಲ್ಲಿ ಕೆಜಿ ಟೊಮೆಟೊ ಗರಿಷ್ಠ 250 ರೂ. ಗೆ ಮಾರಾಟವಾಗುತ್ತಿದೆ. ಮುಂಗಾರು ಮಳೆಯಿಂದಾಗಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ದರದಲ್ಲಿ ತೀವ್ರ ಏರಿಕೆಯಾಗಿದೆ. ಈ ಬೆಲೆ ಏರಿಕೆಯು ಜುಲೈ, ಆಗಸ್ಟ್ ಮತ್ತು ಅಕ್ಟೋಬರ್ ಹಾಗು ನವೆಂಬರ್ ಅವಧಿಯವರೆಗೆ ಮುಂದುವರೆಯುವ ಸಾಧ್ಯತೆ ಇದೆ.
ಇದನ್ನೂ ಓದಿ:8,300 ಬಾಕ್ಸ್ ಟೊಮೆಟೊ - 1.10 ಕೋಟಿ ಆದಾಯ!... ರೈತನ ಮೊಗದಲ್ಲಿ ಮೂಡಿದ ಮಂದಹಾಸ