ನವದೆಹಲಿ: ಅಕಾಲಿಕ ಮಳೆಯಿಂದಾಗಿ ಕಳೆದ ವರ್ಷದಿಂದ ಪ್ರತಿ ಕೆ.ಜಿ. ಟೊಮೆಟೊ ದರವು 67 ರೂ.ಗೆ ಏರಿಕೆಯಾಗಿದ್ದು, ಡಿಸೆಂಬರ್ ಹೊತ್ತಿಗೆ ಉತ್ತರದ ರಾಜ್ಯಗಳಿಂದ ಟೊಮೆಟೊ ಬೆಳೆ ಆಗಮನದೊಂದಿಗೆ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಡಿಸೆಂಬರ್ ಹೊತ್ತಿಗೆ ಉತ್ತರ ಭಾರತದ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಮಾರುಕಟ್ಟೆಗೆ ಬರುತ್ತದೆ. ಇದರಿಂದ ಟೊಮೆಟೊ ದರ ಇಳಿಕೆ ಆಗುತ್ತದೆ. ಕಳೆದ ವರ್ಷಕ್ಕೆ ಸಮನಾಗಿ ಟೊಮೆಟೊ ಬರುವ ನಿರೀಕ್ಷೆಯಿದೆ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಕಳೆದ ವರ್ಷ 21.32 ಲಕ್ಷ ಟನ್‌ಗಳಷ್ಟು ಟೊಮೆಟೊ ಬೆಳೆ ಆಗಮಿಸಿತ್ತು. ಆದ್ರೆ ಈ ಬಾರಿ ಹವಾಮಾನ ವೈಪರೀತ್ಯದಿಂದ ಕೇವಲ 19.62 ಲಕ್ಷ ಟನ್ ಟೊಮೆಟೊ ಆಗಮಿಸಿದೆ.
ಸೆಪ್ಟೆಂಬರ್ ಅಂತ್ಯಕ್ಕೆ ಪಂಜಾಬ್, ಉತ್ತರ ಪ್ರದೇಶ, ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಅಕಾಲಿಕ ಮಳೆಯಾದ ಕಾರಣ ಬೆಳೆ ಹಾನಿ ಮತ್ತು ಟೊಮೆಟೊ ಆಗಮನ ವಿಳಂಬವಾಗಿದೆ. ಅಲ್ಲದೆ, ಉತ್ತರ ಭಾರತದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಭಾರಿ ಮಳೆಯಾಗಿದ್ದು, ಟೊಮೆಟೊ ಪೂರೈಕೆಗೆ ಅಡ್ಡಿಯುಂಟಾಗಿದೆ ಹಾಗೂ ಬೆಳೆ ಹಾನಿಯಾಗಿದೆ. ಇದರಿಂದ ಟೊಮೆಟೊ ಬೆಲೆ ಹೆಚ್ಚು ಅಸ್ಥಿರವಾಗಿದೆ ಎಂದು ಬೆಲೆ ಏರಿಕೆ ಕಾರಣ ಕುರಿತು ಸಚಿವಾಲಯ ತಿಳಿಸಿದೆ.
ಮಾರುಕಟ್ಟೆಗೆ ಬೆಳೆಗಳ ಆಗಮನದಲ್ಲಿ ಯಾವುದೇ ಸಣ್ಣ ಅಡೆತಡೆಗಳು ಅಥವಾ ಅಕಾಲಿಕ ಮಳೆಯಿಂದ ಬೆಲೆ ಏರಿಕೆಯಂತಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ನವೆಂಬರ್ 25ರ ಹೊತ್ತಿಗೆ ಭಾರತದಲ್ಲಿ ಟೊಮೆಟೊ ಬೆಲೆ ಕೆಜಿಗೆ 67 ರೂ. ರಷ್ಟಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇಕಡಾ 63ರಷ್ಟು ಹೆಚ್ಚಾಗಿದೆ. ಕೃಷಿ ಸಚಿವಾಲಯದ ಪ್ರಕಾರ, ಪ್ರಸಕ್ತ ವರ್ಷದ ಬೇಸಿಗೆಯಲ್ಲಿ ಟೊಮೆಟೊ ಉತ್ಪಾದನೆಯು 69.52 ಲಕ್ಷ ಟನ್ ಆಗಿದೆ. ಇದೆ ಸಮಯಕ್ಕೆ ಕಳೆದ ವರ್ಷ 70.12 ಲಕ್ಷ ಟನ್ ಹೆಚ್ಚು ಉತ್ಪಾದನೆಯಾಗಿದ್ದು ಎಂದು ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ, ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆಜಿಗೆ 88 ರೂ. ಪೋರ್ಟ್ ಬ್ಲೇರ್‌ನಲ್ಲಿ ನವೆಂಬರ್ 22 ರಂದು ಕೆಜಿಗೆ 113 ರೂ ಇದ್ದ ಬೆಲೆ ಶುಕ್ರವಾರ 143 ರೂ.ಗೆ ಜಿಗಿದಿದೆ.