ನವದೆಹಲಿ:ಟೊಮೆಟೊ ಬೆಲೆ ಭಾರಿ ಏರಿಕೆ ಕಂಡ ಬೆನ್ನಲ್ಲೇ ಎಲ್ಲರ ಬಾಯಲ್ಲೂ ಟೊಮೆಟೊ ಬಗ್ಗೆನೇ ಮಾತು. ಅಷ್ಟೇ ಅಲ್ಲ, ಟ್ವಿಟರ್‌ನಲ್ಲಿ ಸಹ ಈ ಕಾಸ್ಟ್ಲಿ ಟೊಮೆಟೊ ಕುರಿತೇ ತರಹೇವಾರಿ ಮೀಮ್ಸ್ಗಳು ಹರಿದಾಡುತ್ತಿವೆ.
ನಿನ್ನೆಯಿಂದ #tomato ಹ್ಯಾಶ್‌ಟ್ಯಾಗ್ ಹೆಚ್ಚು ಟ್ರೆಂಡಿಂಗ್‌ನಲ್ಲಿದೆ. ಮೀಮ್-ಮೇಕರ್‌ಗಳು ಡಿಫರೆಂಟ್ ಆಗಿ, ಹಾಸ್ಯಭರಿತವಾಗಿ ಮೀಮ್ಸ್ಗಳನ್ನು ಶೇರ್ ಮಾಡುತ್ತಿದ್ದಾರೆ.
ಪ್ರತಿ ಚಳಿಗಾಲದಲ್ಲಿ ಪ್ರತಿ ಕಿಲೋಗೆ ₹20 ಇರುತ್ತಿದ್ದ ಟೊಮೆಟೊ ಬೆಲೆ ಇದೀಗ ದೇಶದಾದ್ಯಂತ ಬಹಳಷ್ಟು ನಗರಗಳಲ್ಲಿ ಪ್ರತಿ ಕೆಜಿಗೆ ₹80 ರಷ್ಟಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ವ್ಯಾಪಕ ಮಳೆಯಿಂದಾಗಿ ಕೆಲವು ದಕ್ಷಿಣದ ರಾಜ್ಯಗಳಲ್ಲಿ ದರಗಳು ಕೆಜಿಗೆ ₹120 ಕ್ಕೆ ಏರಿದೆ. ಪೂರೈಕೆ ಕೊರತೆ ಎದುರಿಸುತ್ತಿರುವ ಚೆನ್ನೈನಲ್ಲಿ ಕೆಜಿಗೆ ಕಿಲೋ ₹140ಕ್ಕೆ ಮಾರಾಟವಾಗುತ್ತಿದೆ. ಕೇರಳದಲ್ಲಿ, ಟೊಮೆಟೊ ಪ್ರತಿ ಕಿಲೋಗೆ ₹90 ರಿಂದ ₹120 ರವರೆಗೆ ಮಾರಾಟವಾಗುತ್ತಿದ್ದರೆ, ರಾಜಧಾನಿ ದೆಹಲಿ ಗ್ರಾಹಕರು ಒಂದು ಕಿಲೋ ಟೊಮೆಟೊಗೆ ₹90 ರಿಂದ ₹108 ರವರೆಗೆ ಹಣ ನೀಡಬೇಕಿದೆ.
ಅಂಕಿಅಂಶಗಳ ಪ್ರಕಾರ, ಟೊಮೆಟೊ ರೀಟೆಲ್ ಬೆಲೆಗಳು ಅಕ್ಟೋಬರ್ ಆರಂಭದಿಂದ ಏರಿಕೆಯಾಗಲು ಪ್ರಾರಂಭಿಸಿದವು. ನವೆಂಬರ್ನಲ್ಲಿ ಗಗನಕ್ಕೇರಿದವು. ಬೆಲೆ ಏರಿಕೆ ಬಗ್ಗೆ ಮಾತನಾಡಿದ ಆಜಾದ್‌ಪುರ ಟೊಮೆಟೊ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಕೌಶಿಕ್, " ಮಳೆಯಿಂದಾಗಿ ದಕ್ಷಿಣ ಭಾರತದಿಂದ ದೆಹಲಿಗೆ ಟೊಮೆಟೋ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಮುಂದಿನ ದಿನಗಳಲ್ಲಿ ಮಳೆ ಮುಂದುವರಿದರೆ, ರಾಷ್ಟ್ರ ರಾಜಧಾನಿಯಲ್ಲಿ ಬೆಲೆ ಪ್ರಸ್ತುತ ಮಟ್ಟದಿಂದ ಏರಿಕೆಯಾಗಬಹುದು" ಎಂದಿದ್ದಾರೆ.
ಟೊಮೆಟೊ ಅಲ್ಲದೆ ಇತರ ತರಕಾರಿಗಳಾದ ಕ್ಯಾಪ್ಸಿಕಂ, ಈರುಳ್ಳಿ ಬೆಲೆಯೂ ಏರಿಕೆಯಾಗಿದೆ. ದೊಡ್ಡ ಪ್ರಮಾಣದ ಟೊಮೆಟೊ ಬೆಳೆಯುವ ಪ್ರದೇಶಗಳು ಮಳೆಯಿಂದ ಹಾನಿಗೊಳಗಾಗಿವೆ ಮತ್ತು ಡೀಸೆಲ್ ಬೆಲೆ ಏರಿಕೆಯು ಬೆಲೆಗಳನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಆಂಧ್ರಪ್ರದೇಶ- ದೇಶದಲ್ಲೇ ಅತಿ ಹೆಚ್ಚು ಟೊಮೆಟೊ ಉತ್ಪಾದಕ ರಾಜ್ಯ. (ಆಂಧ್ರ ಸುಮಾರು 26.67 ಲಕ್ಷ ಮೆಟ್ರಿಕ್ ಟನ್ ಟೊಮೆಟೊ ಬೆಳೆಯುತ್ತದೆ) ಆದರೆ, ಇಲ್ಲೇ ಟೊಮೆಟೊವನ್ನು ಕಿಲೋಗೆ ₹100 ರ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.