ನಂದ್ಯಾಲ (ಆಂಧ್ರಪ್ರದೇಶ):ಗ್ರಾಹಕರನ್ನು ಕಂಗಾಲಾಗಿಸಿದ್ದ ಟೊಮೆಟೊ ಬೆಲೆ ಈಗ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ. ಈ ವರ್ಷದ ಜುಲೈ ತಿಂಗಳ ಮಧ್ಯಭಾಗದಲ್ಲಿ ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆ ಸೇರಿದಂತೆ ದೇಶಾದ್ಯಂತ ಟೊಮೆಟೊ ಬೆಲೆ ಕೆ.ಜಿಗೆ 200 ರಿಂದ 250 ರೂಪಾಯಿ ಇತ್ತು. ಆದ್ರೀಗ ಪಾತಾಳ ತಲುಪಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ರಸ್ತೆಯಲ್ಲಿ ಸುರಿದು ಆಕ್ರೋಶ, ಹತಾಶೆ ತೋರಿಸುತ್ತಿದ್ದಾರೆ.
ಗುರುವಾರ ನಂದ್ಯಾಲ ಜಿಲ್ಲೆಯ ಮಾರುಕಟ್ಟೆಯಲ್ಲಿ ಟೊಮೆಟೊ ಕೆ.ಜಿಗೆ 1 ರೂ. ಯಿಂದ 3 ರೂ.ಗೆ ಮಾರಾಟವಾಗುತ್ತಿತ್ತು. ವ್ಯಾಪಾರಸ್ಥರು ದೊಡ್ಡ ಪ್ರಮಾಣದಲ್ಲಿ ಖರೀದಿಸಿದರೂ ಇತರೆ ಪ್ರದೇಶಗಳಲ್ಲಿ ನ್ಯಾಯಯುತ ಬೆಲೆ ಇಲ್ಲದ ಕಾರಣ ಪೂರೈಕೆ ಸ್ಥಗಿತಗೊಂಡಿದೆ. ಕನಿಷ್ಠ ಸಾರಿಗೆ ಶುಲ್ಕವೂ ಸಿಗದ ಕಾರಣ ಇಲ್ಲಿನ ರೈತರು ತೀವ್ರ ಬೇಸರ ಹೊರಹಾಕುತ್ತಿದ್ದಾರೆ. ಜಿಲ್ಲೆಯ ಡೋನ್ನ ರಾಷ್ಟ್ರೀಯ ಹೆದ್ದಾರಿ ಬದಿ ಟೊಮೆಟೊ ರಾಶಿಯೇ ಕಂಡು ಬಂತು. ಸ್ಥಳೀಯರು ಚೀಲಗಳಲ್ಲಿ ಟೊಮೆಟೊ ತುಂಬಿಕೊಂಡು ಹೋದರೆ, ಉಳಿದ ಬೆಳೆ ಜಾನುವಾರುಗಳಿಗೆ ಮೇವಾಯಿತು.
ಈರುಳ್ಳಿ ಬೆಲೆ ಏರಿಕೆ ಸಾಧ್ಯತೆ:ಇತ್ತೀಚಿಗೆ ಕೃಷಿ ಮಾರುಕಟ್ಟೆ ತಜ್ಞರು , ಟೊಮೆಟೊ ಬೆಲೆ ಶತಕ ಬಾರಿಸಿದ ಬಳಿಕ ಈರುಳ್ಳಿ ಬೆಲೆ ಗ್ರಾಹಕರಿಗೆ ಕಣ್ಣೀರು ತರಿಸುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ್ದರು. ಮುಂದಿನ ತಿಂಗಳ ಹೊತ್ತಿಗೆ ಈರುಳ್ಳಿ ಬೆಲೆ ದುಪ್ಟಟ್ಟಾಗಿ ಕೆ.ಜಿಗೆ 55 ರಿಂದ 60 ರೂಪಾಯಿ ತಲುಪಬಹುದು ಎಂದು ಹೇಳಿದ್ದರು. ದೇಶದಲ್ಲಿ ಅಪಾರ ಪ್ರಮಾಣದ ಈರುಳ್ಳಿ ಸಂಗ್ರಹವಿದ್ದರೂ, ಈ ವರ್ಷ ಅತಿಯಾದ ಬೇಸಿಗೆಯ ಶಾಖದಿಂದಾಗಿ ಬಹಳಷ್ಟು ಪ್ರಮಾಣದ ಈರುಳ್ಳಿ ಗುಣಮಟ್ಟ ಕಳಪೆಯಾಗಿದೆ. ಹೀಗಾಗಿ ಉತ್ತಮ ಗುಣಮಟ್ಟದ ಈರುಳ್ಳಿಯ ಬೆಲೆ ಹೆಚ್ಚಳವಾಗಬಹುದು ಎಂದು ತಜ್ಞರು ಊಹಿಸಿದ್ದರು.
ದೇಶದ ಈರುಳ್ಳಿ ಉತ್ಪಾದನೆಯಲ್ಲಿ ಶೇ 30ಕ್ಕಿಂತ ಹೆಚ್ಚು ಪಾಲು ಹೊಂದಿರುವ ಮಹಾರಾಷ್ಟ್ರದಲ್ಲಿ ಬೆಳೆ ನಾಟಿ ವಿಳಂಬವಾಗಿರುವುದು ಕೂಡ ಬೆಲೆ ಏರಿಕೆಗೆ ಒಂದು ಕಾರಣ. ಸುಗ್ಗಿ ಅವಧಿಯಲ್ಲಿ ದಕ್ಷಿಣ ಭಾರತದಲ್ಲಿನ ಹೊಸ ಬೆಳೆ ಮಳೆಯಿಂದ ಹಾಳಾದರೆ ಈರುಳ್ಳಿ ಬೆಲೆ ಮತ್ತೆ ಹೆಚ್ಚಾಗಬಹುದು ಎನ್ನಲಾಗುತ್ತಿದೆ. ಈಗಷ್ಟೇ ಟೊಮೆಟೊ ಬೆಲೆ ಕಡಿಮೆಯಾಗುತ್ತಿರುವ ಮಧ್ಯೆ ಈರುಳ್ಳಿ ಬೆಲೆ ಗ್ರಾಹಕರ ಮಂಡೆ ಬಿಸಿ ಹೆಚ್ಚಿಸಬಹುದು.
ಇದನ್ನೂ ಓದಿ:ಕೆ.ಜಿಗೆ ₹20! ಮಾರುಕಟ್ಟೆಗೆ ಹೆಚ್ಚಿದ ಟೊಮೆಟೊ ಆವಕ; 2 ತಿಂಗಳ ನಂತರ ಬೆಲೆಯಲ್ಲಿ ಭಾರಿ ಇಳಿಕೆ