ನವದೆಹಲಿ: ದೇಶದ ಪ್ರಮುಖ ನಗರಗಳಲ್ಲಿ ಟೊಮೆಟೊ ಬೆಲೆಯಲ್ಲಿ ಹಠಾತ್ ಏರಿಕೆ ಕಂಡಿದೆ. ಮಂಗಳವಾರ ಪ್ರತಿ ಕಿಲೋ ಟೊಮೆಟೊ ದರ 100 ರೂಪಾಯಿಗೂ ಅಧಿಕವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಈ ಬೆಲೆ ಏರಿಕೆಯು ತಾತ್ಕಾಲಿಕ ವಿದ್ಯಮಾನವಾಗಿದ್ದು, ಶೀಘ್ರದಲ್ಲೇ ಇದರ ಬೆಲೆ ನಿಯಂತ್ರಣ ಆಗಲಿದೆ ಎಂದು ಹೇಳಿದ್ದಾರೆ.
ಟೊಮೆಟೊ ಇದು ಹೆಚ್ಚು ಹಾಳಾಗುವ ವಸ್ತುವಾಗಿದೆ. ಹಠಾತ್ ಮಳೆ ಬೀಳುವ ಪ್ರದೇಶಗಳಲ್ಲಿ ಸಾರಿಗೆ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ತಾತ್ಕಾಲಿಕ ಸಮಸ್ಯೆಯಾಗಿದೆ. ಬೆಲೆಗಳು ಶೀಘ್ರದಲ್ಲೇ ತಣ್ಣಗಾಗುತ್ತವೆ. ಇಂತಹ ಪ್ರತಿ ವರ್ಷ ಕೂಡ ಈ ರೀತಿ ಆಗುತ್ತದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಟೀಕೆ:ಮತ್ತೊಂದೆಡೆ, ದೇಶದಾದ್ಯಂತ ಟೊಮೆಟೊ ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿಯವರ ತಪ್ಪು ನೀತಿಗಳೇ ಕಾರಣ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಟೊಮೇಟೊ ಬೆಲೆ ಏರಿಕೆ ಕುರಿತು ಮಾಧ್ಯಮಗಳ ವರದಿ ಉಲ್ಲೇಖಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ. 'ಪ್ರಧಾನಿ ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆಯನ್ನು ತಮ್ಮ ಟಾಪ್ ಆದ್ಯತೆ ಎಂದು ಬಣ್ಣಿಸಿದ್ದಾರೆ. ಆದರೆ, ಅವರ ತಪ್ಪು ನೀತಿಗಳಿಂದಾಗಿ ಮೊದಲಿಗೆ ಟೊಮೆಟೊಗಳನ್ನು ರಸ್ತೆಗೆ ಎಸೆಯಲಾಗುತ್ತಿತ್ತು. ಈಗ ಕೆಜಿಗೆ 100 ರೂ.ಗೆ ಮಾರಾಟವಾಗುತ್ತದೆ' ಎಂದು ಟೀಕಿಸಿದ್ದಾರೆ.
ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ನೆಟ್ಟ ಡಿಸೋಜ ಮಾತನಾಡಿ, ಬಡವರ ತಟ್ಟೆಯಿಂದ ಬೇಳೆಕಾಳು ಮಾಯವಾಯಿತು, ಹಿಟ್ಟು ಮಾಯವಾಯಿತು, ಎಣ್ಣೆ ಮಾಯವಾಯಿತು.. ಈಗ ತರಕಾರಿಯೂ ಮಾಯವಾಯಿತು. ಮೋದಿ ಜೀ ನೀವು ವಿದೇಶಗಳಲ್ಲಿ ಆರ್ಥಿಕತೆಯ ಬಗ್ಗೆ ದೊಡ್ಡದಾಗಿ ಮಾತನಾಡುತ್ತೀರಿ.. ಆದರೆ ಹಣದುಬ್ಬರವು ನಿಮ್ಮ ನಿಯಂತ್ರಣದಿಂದ ಹೊರಬರುತ್ತಿದೆ. ನಿರ್ಮಲಾ ಜೀ, ಈರುಳ್ಳಿಯ ನಂತರ ನಾವು ಟೊಮೆಟೊ ತಿನ್ನುವುದನ್ನು ನಿಲ್ಲಿಸಬೇಕೇ ಎಂದು ವ್ಯಂಗ್ಯಭರಿತವಾಗಿ ವಾಗ್ದಾಳಿ ಮಾಡಿದ್ದಾರೆ.
ಗೋರಖ್‌ಪುರ-ಬಳ್ಳಾರಿಯಲ್ಲಿ ಟೊಮೆಟೊ ಬೆಲೆ 122 ರೂಪಾಯಿ!:ಗ್ರಾಹಕ ವ್ಯವಹಾರಗಳ ಇಲಾಖೆ ಅಂಕಿ-ಅಂಶಗಳ ಪ್ರಕಾರ, ಇಂದು ಅಖಿಲ ಭಾರತ ಮಟ್ಟದಲ್ಲಿ ಟೊಮೆಟೊ ಸರಾಸರಿ ಬೆಲೆ ಕೆಜಿಗೆ 46 ರೂ. ಆಗಿದೆ. ಮಾದರಿ ಬೆಲೆ ಕೆಜಿಗೆ 50 ರೂ.ಗಳಾಗಿದ್ದರೆ, ಗರಿಷ್ಠ ಬೆಲೆ ಕೆಜಿಗೆ 122 ರೂ.ಗೆ ತಲುಪಿದೆ. ಪ್ರಮುಖ ನಾಲ್ಕು ಮಹಾನಗರಗಳಲ್ಲಿ ದೆಹಲಿಯಲ್ಲಿ ಚಿಲ್ಲರೆ ದರದಲ್ಲಿ ಟೊಮೆಟೊ ಕೆಜಿಗೆ 60 ರೂ., ಮುಂಬೈನಲ್ಲಿ ಕೆಜಿಗೆ 42 ರೂ., ಕೋಲ್ಕತ್ತಾದಲ್ಲಿ ಕೆಜಿಗೆ 75 ರೂ. ಮತ್ತು ಚೆನ್ನೈನಲ್ಲಿ ಟೊಮೆಟೊ ಕೆಜಿಗೆ 67 ರೂ. ಇದೆ.
ಇತರ ಪ್ರಮುಖ ನಗರಗಳ ಪೈಕಿ ಬೆಂಗಳೂರಿನಲ್ಲಿ ಕೆಜಿಗೆ 52 ರೂ., ಜಮ್ಮುವಿನಲ್ಲಿ 80 ರೂ., ಲಖನೌದಲ್ಲಿ ಕೆಜಿಗೆ 60 ರೂ., ಶಿಮ್ಲಾದಲ್ಲಿ ರೂ. 88, ಭುವನೇಶ್ವರದಲ್ಲಿ 100 ಮತ್ತು ರಾಯ್ಪುರದಲ್ಲಿ ರೂ. 99 ರೂಪಾಯಿ ಆಗಿದ್ದರೆ, ಉತ್ತರ ಪ್ರದೇಶದ ಗೋರಖ್‌ಪುರ ಹಾಗೂ ಕರ್ನಾಟಕದ ಬಳ್ಳಾರಿಯಲ್ಲಿ ಟೊಮೆಟೊ ಬೆಲೆ ಗರಿಷ್ಠ 122 ರೂ.ಗೆ ಮುಟ್ಟಿದೆ.
ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಪ್ರಮುಖ ಉತ್ಪಾದಕ ರಾಜ್ಯಗಳಲ್ಲಿ ಮಳೆಯಿಂದಾಗಿ ಪೂರೈಕೆಯ ಮೇಲೆ ಪರಿಣಾಮ ಬೀರಿದ ಕಾರಣ ಕಳೆದ ಒಂದು ವಾರದಲ್ಲಿ ಮದರ್ ಡೈರಿಯ ಸಫಲ್ ಮಳಿಗೆಗಳಲ್ಲಿ ಟೊಮೆಟೊ ಬೆಲೆ ದ್ವಿಗುಣಗೊಂಡಿದ್ದು, ಕೆಜಿಗೆ ಸುಮಾರು 80 ರೂ. ಆಗಿದೆ. ದೆಹಲಿ-ಎನ್‌ಸಿಆರ್ ಮಾರುಕಟ್ಟೆಯಲ್ಲಿ 300ಕ್ಕೂ ಹೆಚ್ಚು ಮದರ್ ಡೈರಿಯ ಸಫಲ್ ಸ್ಟೋರ್‌ಗಳಿವೆ. ಈ ಅಂಗಡಿಗಳಲ್ಲಿ ಉತ್ತಮ ಗುಣಮಟ್ಟದ ಟೊಮೆಟೊ ಮಂಗಳವಾರ ಕೆಜಿಗೆ 78 ರೂ.ಗೆ ಮಾರಾಟವಾಗುತ್ತಿದೆ. ಕೆಲವು ತಳಿಗಳು ಕಡಿಮೆ ದರದಲ್ಲಿಯೂ ದೊರೆಯುತ್ತವೆ.
ಬೇಡಿಕೆ ಮತ್ತು ಪೂರೈಕೆ ನಡುವೆ ಅಂತರ:ಮುಂಗಾರು ಆರಂಭದಿಂದ ಟೊಮೆಟೊ ಬೆಳೆ ಮೇಲೆ ಪರಿಣಾಮ ಉಂಟಾಗಿದೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಂತಹ ಪ್ರದೇಶಗಳಲ್ಲಿ ಮಳೆಯಿಂದ ಪೂರೈಕೆ ಸ್ಥಗಿತವಾಗಿದೆ. ಇದರಿಂದಾಗಿ ಬೇಡಿಕೆ ಮತ್ತು ಪೂರೈಕೆ ನಡುವೆ ಅಂತರ ಹೆಚ್ಚಾಗಿದೆ ಎಂದು ಮದರ್ ಡೈರಿ ವಕ್ತಾರರು ತಿಳಿಸಿದ್ದಾರೆ. ಮೊಬೈಲ್ ಆ್ಯಪ್ ಮೂಲಕ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಮಾರಾಟ ಮಾಡುವ ಅಗ್ರಿಟೆಕ್ ಸ್ಟಾರ್ಟ್ಅಪ್ ಒಟಿಪಿ, ಟೊಮೆಟೊವನ್ನು ಕೆಜಿಗೆ 86 ರೂ.ಗೆ ಮಾರಾಟ ಮಾಡುತ್ತಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಬಿಗ್ ಬಾಸ್ಕೆಟ್‌ನಲ್ಲಿ ಟೊಮ್ಯಾಟೊ ಕೆಜಿಗೆ 80-85 ರೂಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ:Tomato: ಕೆಜಿಗೆ 20 ರೂಪಾಯಿಯಿಂದ ₹100ಕ್ಕೆ ಜಿಗಿದ ಟೊಮೆಟೊ ಬೆಲೆ! ಕಾರಣವೇನು ಗೊತ್ತೇ?