ಅದಿಲಾಬಾದ್: ಒಂದೇ ಒಂದು ಟೊಮೆಟೊ ಬೆಲೆ 20 ರೂಪಾಯಿ ಎಂದರೆ ನೀವು ನಂಬಲೇಬೇಕು. ಕೆಜಿ ಲೆಕ್ಕ ಹೋಗಿ ಪೀಸ್ ಲೆಕ್ಕದಲ್ಲಿ ಟೊಮೆಟೊ ಮಾರಾಟದ ಸಮಯ ಬಂದಿದೆ ಎಂದರೆ ತಪ್ಪಾಗಲಾರದು. ಇತ್ತೀಚಿನವರೆಗೂ ಒಂದು ಕಿಲೋ ಟೊಮೆಟೊ ರೇಟ್ 100 ರೂ. ಆಗಿತ್ತು. ಆದರೆ ಬುಧವಾರ ಅದಿಲಾಬಾದ್‌ನ ರೈತ ಬಜಾರ್‌ನಲ್ಲಿ ದರ 200 ರೂ.ಗೆ ತಲುಪಿದೆ. ಪ್ರತಿ ಕೆಜಿಗೆ 10 ರಿಂದ 12 ಟೊಮೆಟೊ ಬರುತ್ತವೆ. ಈ ಲೆಕ್ಕಾಚಾರದ ಪ್ರಕಾರ ಪ್ರತಿ ಟೊಮೆಟೊ ಬೆಲೆ 20 ರೂ. ಆಗುತ್ತಿದೆ.
ಆದಿಲಾಬಾದ್ ಜಿಲ್ಲೆಯ ಜನಸಂಖ್ಯೆಯ ಅವಶ್ಯಕತೆಗಳನ್ನು ಪೂರೈಸಲು ಪ್ರತಿದಿನ 50 ಟನ್ ಟೊಮೆಟೊ ಬೇಕಾಗುತ್ತದೆ. ಅತಿ ಕಡಿಮೆ ಬೆಲೆಗೆ ಸಿಗುತ್ತಿದ್ದ ಟೊಮೆಟೊವನ್ನು ಬಹುತೇಕ ಎಲ್ಲ ರೀತಿಯ ಪಲ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಆದರೆ ಬೆಲೆ ಹೀಗೆ ಸಿಕ್ಕಾಪಟ್ಟೆ ಹೆಚ್ಚಾಗಿರುವುದರಿಂದ ವಾರಕ್ಕೆ ಒಂದು ಅಥವಾ ಎರಡು ಟೊಮೆಟೊ ಬಳಸುವ ಸ್ಥಿತಿ ಇದೆ.
ಜಿಲ್ಲೆಯಲ್ಲಿ ಮಳೆಯಾಶ್ರಿತವಾಗಿ ಮಾತ್ರ ಟೊಮೆಟೊ ಬೆಳೆಯಲಾಗುತ್ತದೆ. ಇಡೀ ಜಿಲ್ಲೆಯಲ್ಲಿ 20 ಸಾವಿರ ಎಕರೆಯಲ್ಲಿ ಟೊಮೆಟೊ ಬೆಳೆಯಲಾಗಿತ್ತು. ಪ್ರತಿ ವರ್ಷವೂ ನಷ್ಟವಾಗುತ್ತಿರುವ ಕಾರಣದಿಂದ ಮತ್ತು ತರಕಾರಿ ಕೃಷಿಗೆ ಸರ್ಕಾರದ ಪ್ರೋತ್ಸಾಹದ ಕೊರತೆಯಿಂದ ಸಾಗುವಳಿ ಪ್ರದೇಶವು ಗಮನಾರ್ಹವಾಗಿ ಕಡಿಮೆಯಾಗಿದೆ.
ಜಿಲ್ಲೆಯಲ್ಲಿ ಬೆಳೆದ ಟೊಮೆಟೊ ಸೆಪ್ಟೆಂಬರ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಬರುತ್ತದೆ. ಆಗ ಪ್ರತಿ ಕಿಲೋ ಬೆಲೆ ರೂ 40ಕ್ಕಿಂತ ಕಡಿಮೆ ಇರಬಹುದು. ಆದರೆ ಇದೇ ಸಮಯದಲ್ಲಿ ಬೇರೆ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬಂದರೆ ಬೆಲೆ ಕಡಿಮೆಯಾಗಿ ನಷ್ಟವಾಗುತ್ತದೆ. ಮಳೆಗಾಲದ ನಂತರ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳ ಅನೇಕ ಹಳ್ಳಿಗಳಿಂದ ಟೊಮೆಟೊವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಈ ಹಂಗಾಮಿನಲ್ಲಿ ಬೇಸಾಯದ ಕೊರತೆ ಹಾಗೂ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿದ್ದು, ಟೊಮೆಟೊ ಕೊರತೆ ಉಂಟಾಗಿದೆ. ಏಕಾಏಕಿ ಇಡೀ ದೇಶದಲ್ಲಿ ಭಾರೀ ಬೇಡಿಕೆ ಬಂದಿದ್ದರಿಂದ ಟೊಮೆಟೊ ಬೆಲೆ ಏರಿಕೆಯಾಗಿದೆ.