ಕೊಯಮತ್ತೂರು/ಕೊಚ್ಚಿ: ನೆರೆ ರಾಜ್ಯ ಕೇರಳದ ಜಿಲ್ಲೆಯೊಂದರಲ್ಲಿ 80ಕ್ಕೂ ಹೆಚ್ಚು ಮಕ್ಕಳಲ್ಲಿ ಟೊಮೆಟೊ ಜ್ವರದ ಲಕ್ಷಣಗಳು ಗೋಚರಿಸಿವೆ. ತಮಿಳುನಾಡು ಮತ್ತು ಕೇರಳ ಗಡಿ ಪ್ರದೇಶವಾಗಿರುವ ವಾಳಯಾರ್‌ನಲ್ಲಿ ಕೊಯಮತ್ತೂರು ಪ್ರವೇಶಿಸುವವರಿಗೆ ವೈದ್ಯಕೀಯ ತಂಡ ಪರೀಕ್ಷೆ ನಡೆಸುತ್ತಿದೆ.
ಎಲ್ಲ ವಾಹನಗಳ ಪ್ರಯಾಣಿಕರನ್ನು ಮತ್ತು ವಿಶೇಷವಾಗಿ ಮಕ್ಕಳನ್ನು ಪರೀಕ್ಷಿಸಲು ಇಬ್ಬರು ವೈದ್ಯಕೀಯ ಅಧಿಕಾರಿಗಳನ್ನು ಸರ್ಕಾರ ನಿಯೋಜಿಸಿದೆ. ಅಷ್ಟೇ ಅಲ್ಲದೇ, ಅಂಗನವಾಡಿಗಳಲ್ಲಿ 05 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವೈದ್ಯಕೀಯ ತಪಾಸಣೆ 24 ಸದಸ್ಯರ ತಂಡ ರಚಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ದರ ಹೀಗಿದೆ ನೋಡಿ..
ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ವೈರಾಣು ಜ್ವರ. ಈ ಬಗ್ಗೆ ಹಚ್ಚಿನ ಅಧ್ಯಯನ ನಡೆಸಲಾಗುತ್ತಿದೆ. ಆತಂಕಪಡುವ ಅಗತ್ಯವಿಲ್ಲ. ಇದು ಮಾರಣಾಂತಿಕವಲ್ಲ. ಸೂಕ್ತ ಚಕಿತ್ಸೆ ಹಾಗೂ ಮುಂಜಾಗ್ರತಾ ಕ್ರಮ ಕೈಗೊಂಡು ರೋಗದಿಂದ ರಕ್ಷಣೆ ಪಡೆಯಬಹುದು ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಏನಿದು ಜ್ವರ?: ಇದೊಂದು ಅಪರೂಪದ ವೈರಲ್ ಜ್ವರವಾಗಿದ್ದು, ಮೈ ಮೇಲೆ ದದ್ದು, ಚರ್ಮದ ಉರಿ ಮತ್ತು ನಿರ್ಜಲೀಕರಣದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ದದ್ದುಗಳು ಕೆಂಪನೆಯ ಬಣ್ಣವಿದ್ದು, ಟೊಮೆಟೊಗೆ ಹೋಲುವ ಕಾರಣ, ಇದಕ್ಕೆ ಟೊಮೆಟೊ ಜ್ವರವೆಂಬ ಹೆಸರಿದೆ. ಜ್ವರ ಕಾಣಿಸಿಕೊಂಡವರಲ್ಲಿ ಟೊಮೆಟೊ ರೀತಿಯ ಗುಳ್ಳೆ, ಜ್ವರ, ಮೈ ಕೈ ನೋವು, ಸಂಧುಗಳಲ್ಲಿ ನೋವು, ಆಯಾಸ ಕಾಣಿಸಿಕೊಳ್ಳುತ್ತದೆ.
ಇದುವರೆಗೆ ಕೇರಳದಲ್ಲಿ ಪತ್ತೆಯಾದ ಎಲ್ಲಾ 80ಕ್ಕೂ ಹೆಚ್ಚು ಪ್ರಕರಣಗಳು ಒಂದೇ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಕೇರಳದಲ್ಲಿ ಟೊಮೆಟೊ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೇರಳದಿಂದ ತಮಿಳುನಾಡಿಗೆ ಮತ್ತು ಕರ್ನಾಟಕಕ್ಕೆ ಪ್ರವೇಶಿಸುವವರ ಮೇಲೆ ಗಡಿ ಭಾಗದಲ್ಲಿ ತೀವ್ರ ನಿಗಾ ಇಡಲಾಗಿದೆ.
ಮುನ್ನೆಚ್ಚರಿಕೆ ಕ್ರಮಗಳೇನು?:
- ಈ ರೋಗ ಲಕ್ಷಣಗಳು ಮಕ್ಕಳಲ್ಲಿ ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ
- ಮಕ್ಕಳಿಗೆ ಕುದಿಸಿ ಆರಿಸಿದ ನೀರು ಕುಡಿಸಿ
- ಟೊಮೆಟೊ ರೀತಿಯ ಗುಳ್ಳೆಗಳು ಕಂಡು ಬಂದ್ರೆ ಕೆರೆಯುವುದಾಗಿ, ಒಡೆಯುವುದಾಗಲಿ ಮಾಡದಿರಿ
- ರೋಗ ಲಕ್ಷಣಗಳು ಕಂಡುಬಂದ ಮಕ್ಕಳಿಗೆ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿ
- ರೋಗ ಬಾಧಿತ ಮಕ್ಕಳಿಂದ ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳಿ
- ಮಕ್ಕಳಿಗೆ ಹೆಚ್ಚು ವಿಶ್ರಾಂತಿ ನೀಡಬೇಕು.