ಹೈದರಾಬಾದ್:ದೇಶಾದ್ಯಂತ ಕಳೆದೊಂದು ತಿಂಗಳಿನಿಂದ ಟೊಮೆಟೊ ಬೆಲೆ ಏರುಗತಿಯಲ್ಲಿದೆ. ಪ್ರತಿ ಕೆಜಿ ಟೊಮೆಟೊ 100ರಿಂದ 200 ರೂಪಾಯಿವರೆಗೂ ಮಾರಾಟವಾಗುತ್ತಿದೆ. ಟೊಮೆಟೊ ಖರೀದಿ ಮಾಡುವ ಬಗ್ಗೆ ಜನತೆ ಆಲೋಚಿಸುವಂತೆ ಆಗಿದೆ. ಇದರ ನಡುವೆ ದುಷ್ಕರ್ಮಿಗಳು ಕಾಟವೂ ಹೆಚ್ಚಾಗಿದೆ. ಟೊಮೆಟೊ ಮಾರಾಟದ ಹಣವಿದೆ ಎಂಬ ಶಂಕೆ ಮೇಲೆ ರೈತನನ್ನು ಹತ್ಯೆಗೈದ ಘಟನೆ ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ವರದಿಯಾಗಿದೆ.
ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಮಂಡಲ ಬೋಡಿಮಲ್ಲದಿನ್ನೆ ಗ್ರಾಮದ ನಿವಾಸಿ ನರೇಂ ರಾಜಶೇಖರ್ ರೆಡ್ಡಿ (62) ಕೊಲೆಯಾದ ರೈತ. ಮಂಗಳವಾರ ರಾತ್ರಿ ದುಷ್ಕರ್ಮಿಗಳು ಕೈಕಾಲುಗಳನ್ನು ಕಟ್ಟಿ ಕುತ್ತಿಗೆಗೆ ಟವೆಲ್ ಬಿಗಿದು ರೈತನ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ ಎಂದು ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಸತ್ಯನಾರಾಯಣ ತಿಳಿಸಿದ್ದಾರೆ.
ರಾಜಶೇಖರ್ ರೆಡ್ಡಿ ಹಾಗೂ ಪತ್ನಿ ಜ್ಯೋತಿ ಇಬ್ಬರೇ ಗ್ರಾಮದಿಂದ ದೂರದ ಜಮೀನಿನಲ್ಲಿ ವಾಸವಾಗಿದ್ದರು. ಟೊಮೆಟೊ ಬೆಳೆದಿದ್ದ ಈ ರೈತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದರು. ಇದೇ ವೇಳೆ, ಅಪರಿಚಿತರು ಟೊಮೆಟೊ ಖರೀದಿ ನೆಪದಲ್ಲಿ ಜಮೀನಿನಲ್ಲಿದ್ದ ಮನೆಗೆ ತೆರಳಿ ರಾಜಶೇಖರ್ ರೆಡ್ಡಿ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಪತ್ನಿ ಜ್ಯೋತಿ ಹಾಲು ಹಾಕಲು ಗ್ರಾಮದೊಳಗೆ ಪತಿ ರಾಜಶೇಖರ್ ರೆಡ್ಡಿ ಹೋಗಿದ್ದಾರೆ ಎಂದಿದ್ದಾರೆ. ಆಗ ಅಲ್ಲಿಂದ ದುಷ್ಕರ್ಮಿಗಳು ತೆರಳಿದ್ದಾರೆ.
ಇದನ್ನೂ ಓದಿ:Bengaluru crime: ಟೊಮೆಟೊ ತುಂಬಿದ್ದ ಬೊಲೆರೊ ವಾಹನ ಹೈಜಾಕ್ ಮಾಡಿದ ಖದೀಮರು..!
ಮತ್ತೊಂದೆಡೆ, ತುಂಬಾ ಸಮಯವಾದರೂ ಮನೆಗೆ ಪತಿ ಬಾರದೇ ಇದ್ದಾಗ ಪತ್ನಿ ಜ್ಯೋತಿಗೆ ಅನುಮಾನ ಬಂದಿದೆ. ಹೀಗಾಗಿ ಜ್ಯೋತಿ ಬೆಂಗಳೂರಿನಲ್ಲಿ ನೆಲೆಸಿರುವ ತಮ್ಮ ಪುತ್ರಿಯರಿಗೆ ವಿಷಯ ತಿಳಿಸಿದ್ದಾರೆ. ಆಗ ಪುತ್ರಿಯರು ತಂದೆ ರಾಜಶೇಖರ್ ರೆಡ್ಡಿಗೆ ಕರೆ ಮಾಡಿದ್ದಾರೆ. ಆದರೆ, ಕರೆಯನ್ನು ಸ್ವೀಕರಿಸಿಲ್ಲ. ಈ ವಿಷಯ ತಿಳಿದ ಸಂಬಂಧಿಕರು ರಾಜಶೇಖರ್ ರೆಡ್ಡಿಯನ್ನು ಹುಡುಕುತ್ತಾ ಹೋಗಿದ್ದಾರೆ. ಈ ವೇಳೆ ರಸ್ತೆ ಮಧ್ಯೆ ಬೈಕ್ ಹಾಗೂ ಮೊಬೈಲ್ ಬಿದ್ದಿರುವುದು ಪತ್ತೆಯಾಗಿದೆ. ಅಂತೆಯೇ, ಸುತ್ತಮುತ್ತಲು ಪರಿಶೀಲಿಸಿದಾಗ ರಾಜಶೇಖರ್ ರೆಡ್ಡಿ ಶವ ಪತ್ತೆಯಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಈ ಘಟನೆ ವಿಷಯ ತಿಳಿದು ಡಿಎಸ್ಪಿ ಕೇಶಪ್ಪ, ಸಿಐ ಸತ್ಯನಾರಾಯಣ, ಎಸ್‌ಐ ವೆಂಕಟೇಶ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟೊಮೆಟೊ ಮಾರಾಟದ ಮಾಡಿದ ಹಣ ಇದೆ ಎಂಬ ಶಂಕೆ ಮೇಲೆ ದುಷ್ಕರ್ಮಿಗಳು ಈ ಕೊಲೆ ನಡೆಸಿರುವ ಮಾಹಿತಿ ಇದೆ ಎಂದು ಪೊಲೀಸರು ತಿಳಿಸಿದ್ದು, ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
ಚಿನ್ನಾಭರಣ ಸಮೇತ ಟೊಮೆಟೊ ಕಳವು!: ಮತ್ತೊಂದೆಡೆ, ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಚಿನ್ನಾಭರಣ ಸಮೇತ ಟೊಮೆಟೊವನ್ನು ಸಹ ಕಳ್ಳರು ಕದ್ದಿರುವ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯ ಬೋಧನ್ ಪಟ್ಟಣದಲ್ಲಿ ಸೋಮವಾರ ರಾತ್ರಿ ಬೀಗ ಹಾಕಿದ್ದ ಮನೆಗೆ ಕಳ್ಳರು ಕನ್ನ ಹಾಕಿ, ಫ್ರಿಡ್ಜ್ನಲ್ಲಿದ್ದ ಒಂದು ಕಿಲೋ ಟೊಮೆಟೊ, ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ.
ಪುರಸಭೆ ನೌಕರ ರಫಿ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ರಫಿ ಕುಟುಂಬ ಸೋಮವಾರ ಸಂಜೆ ಮನೆಗೆ ಬೀಗ ಹಾಕಿ ಸಿದ್ದಿಪೇಟೆಯಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಬೆಳಗ್ಗೆ ಹಿಂತಿರುಗಿ ನೋಡಿದಾಗ ಮನೆಯ ಬೀಗ ಮುರಿದಿತ್ತು. ಒಳಗೆ ಹೋಗಿ ನೋಡಿದಾಗ ಲಾಕಕ್ನಲ್ಲಿದ್ದ ರೂ.1.28 ಲಕ್ಷ ನಗದು ಹಾಗೂ 12 ತೊಲ ಚಿನ್ನಾಭರಣ ಕಾಣೆಯಾಗಿದೆ. ಅಲ್ಲದೇ, ಫ್ರಿಡ್ಜ್ ತೆರೆದು ಪರಿಶೀಲಿಸಿದಾಗ ಅದರಲ್ಲಿದ್ದ ಒಂದು ಕಿಲೋ ಟೊಮೆಟೊವನ್ನು ಕೂಡ ಕಳ್ಳರು ತೆಗೆದುಕೊಂಡು ಹೋಗಿರುವುದು ಕಂಡು ಬಂದಿದೆ. ಈ ಬಗ್ಗೆ ರಫಿ ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
ಇದನ್ನೂ ಓದಿ:ಟೊಮೆಟೊ ದುಬಾರಿ: ಕಳ್ಳರಿಂದ ತರಕಾರಿ ರಕ್ಷಿಸಲು ಪಾಳಿಯಲ್ಲಿ ಕಾವಲು ಕಾಯುತ್ತಿರುವ ರೈತರು!