ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಕಂಚಿನ ಪದಕದ ಗೆಲುವು 2016ರ ರಿಯೋ ಒಲಿಂಪಿಕ್ಸ್ಬೆಳ್ಳಿ ಪದಕದ ಗೆಲುವಿಗಿಂತ ಕಠಿಣವಾಗಿತ್ತು ಎಂದು ಪಿ.ವಿ. ಸಿಂಧು ಹೇಳಿದ್ದಾರೆ. 26 ವರ್ಷದ ಸಿಂಧು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಕೇವಲ 53 ನಿಮಿಷಗಳಲ್ಲಿಚೀನಾದ ಹೀ ಬಿಂಗ್ಜಿಯಾವೊ ಅವರನ್ನು ಸೋಲಿಸಿ ಇತಿಹಾಸ ನಿರ್ಮಿಸಿದ್ದಾರೆ.
ಒತ್ತಡ ತೀವ್ರವಾಗಿತ್ತು: ಸಿಂಧು
ಕಂಚಿನ ಪದಕ ಗೆದ್ದ ಕೆಲವೇ ಕ್ಷಣಗಳ ಬಳಿಕ ಪ್ರತಿಕ್ರಿಯಿಸಿದ ಸಿಂಧು, ಟೋಕಿಯೋ ಒಲಿಂಪಿಕ್ಸ್ ಕಠಿಣವಾಗಿದೆ ಮತ್ತು ಟೋಕಿಯೋ ಕಂಚು ರಿಯೋ ಒಲಿಂಪಿಕ್ಸ್‌ನಲ್ಲಿ ಗೆದ್ದ ತನ್ನ ಬೆಳ್ಳಿಗಿಂತ ಕಠಿಣ ಪದಕವಾಗಿದೆ. 2016ರಲ್ಲಿ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ ಈ ಒಲಿಂಪಿಕ್ಸ್‌ನಲ್ಲಿ ಭರವಸೆಯ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದರಿಂದ ಈ ಸಲ ಒತ್ತಡ ತೀವ್ರವಾಗಿತ್ತು ಎಂದು ಸಿಂಧು ಹೇಳಿದರು.
ನಾನು ತುಂಬಾ ಸಂತೋಷಪಟ್ಟಿದ್ದೇನೆ:
ಕಂಚಿನ ಪದಕ ಗೆದ್ದಿದ್ದಕ್ಕೆ ನಾನು ತುಂಬಾ ಸಂತೋಷಪಟ್ಟಿದ್ದೇನೆ. ಏಕೆಂದರೆ ನಾನು ಹಲವು ವರ್ಷಗಳಿಂದ ಕಷ್ಟಪಟ್ಟಿದ್ದೇನೆ. ನನ್ನ ತಲೆಯಲ್ಲಿ ಬಹಳಷ್ಟು ಭಾವನೆಗಳು ಹಾದುಹೋಗುತ್ತಿದ್ದವು - ನಾನು ಕಂಚು ಗೆದ್ದಿದ್ದಕ್ಕೆ ಸಂತೋಷಪಡಬೇಕೇ ಅಥವಾ ಫೈನಲ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಕ್ಕೆ ದುಃಖಿಸಬೇಕೇ? ಆದರೆ ಒಟ್ಟಾರೆಯಾಗಿ, ಈ ಒಂದು ಪಂದ್ಯಕ್ಕಾಗಿ ನಾನು ನನ್ನ ಭಾವನೆಗಳನ್ನು ಮುಚ್ಚಿಡಬೇಕಾಯ್ತು ಮತ್ತು ನನ್ನಿಂದ ಅತ್ಯುತ್ತಮವಾದದ್ದು ಹೊರಬರಬೇಕಿತ್ತು. ನಾನು ನಿಜವಾಗಿಯೂ ಸಂತೋಷವಾಗಿದ್ದೇನೆ ಮತ್ತು ಚೆನ್ನಾಗಿ ಕೆಲಸ ಮಾಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ನನ್ನ ದೇಶಕ್ಕೆ ಪದಕ ದೊರೆತಿರುವುದು ಹೆಮ್ಮೆಯ ಕ್ಷಣ ಎಂದು ಸಿಂಧು ಸಂತಸ ಹಂಚಿಕೊಂಡಿದ್ದಾರೆ.