ಲಖನೌ(ಉತ್ತರಪ್ರದೇಶ):ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಚುನಾವಣಾ ಯುದ್ಧಕ್ಕೆ ಇಂದು ಅಂತಿಮ ತೆರೆ ಬೀಳಲಿದೆ. ಇವತ್ತು ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಾಣಸಿ ಲೋಕಸಭಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು ಸೇರಿ ಸುಮಾರು 54 ಕ್ಷೇತ್ರಗಳಲ್ಲಿ ಜನ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಫೆಬ್ರವರಿ 10 ರಂದು ಪ್ರಾರಂಭವಾಗಿ ಮಾರ್ಚ್ 7ರಂದು 7ನೇ ಹಾಗೂ ಕೊನೆ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದೆ.
ಬಿಜೆಪಿ, ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಿಎಸ್‌ಪಿಯ ಹಿರಿಯ ನಾಯಕರಿಂದ ಮತದಾರರನ್ನು ಸೆಳೆಯಲು ಎಲ್ಲ ಪ್ರಯತ್ನ ಮಾಡಿದ್ದಾರೆ. ಕೊನೆ ಹಂತದ ಪ್ರಚಾರ ಶನಿವಾರವೇ ಕೊನೆಗೊಂಡಿದ್ದು, ಇದು ಅಂತಿಮ ಹಂತದ ಚುನಾವಣೆಗೆ ಮತದಾನ ನಡೆಯುತ್ತಿದೆ. ಆಡಳಿತಾರೂಢ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಹವಣಿಸುತ್ತಿದ್ದರೆ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಯೋಗಿ ಆದಿತ್ಯನಾಥ್ ಸರ್ಕಾರವನ್ನು ಉರುಳಿಸಲು ಹವಣಿಸುತ್ತಿವೆ.