ಹೈದರಾಬಾದ್: ಖಗೋಳ ವಿದ್ಯಮಾನಗಳಲ್ಲಿ ಒಂದಾಗಿರುವ 'ಶೂನ್ಯ ನೆರಳಿನ ದಿನ' ಇಂದು ಹೈದರಾಬಾದ್ ನಗರದಲ್ಲಿ ಕಾಣಿಸಿಕೊಳ್ಳಲಿದೆ. ಮಧ್ಯಾಹ್ನ ಸಮಯ 12.12ರಿಂದ 12.14ರವರೆಗೆ ಶೂನ್ಯ ನೆರಳಿನ ದಿನಕ್ಕೆ ಮುತ್ತಿನ ನಗರಿ ಸಾಕ್ಷಿಯಾಗಲಿದೆ. ಈ ಸಂದರ್ಭದಲ್ಲಿ ಯಾವುದೇ ನೆರಳು ಕಾಣಸಿಗುವುದಿಲ್ಲ.
ಸೂರ್ಯ ಸರಿಯಾಗಿ ಮನುಷ್ಯನ ನೆತ್ತಿಯ ಮೇಲೆ ಅಥವಾ ಕಿರಣಗಳು ಯಾವುದೇ ವಸ್ತುವಿನ ಮೇಲೆ ಲಂಬವಾಗಿ ಬಿದ್ದಾಗ ಅದು ಶೂನ್ಯ ನೆರಳಿನ ಕ್ಷಣವಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಬಿರ್ಲಾ ವಿಜ್ಞಾನ ಕೇಂದ್ರದ ಅಧಿಕಾರಿಗಳು, ಯಾವುದೇ ವಸ್ತುಗಳನ್ನು 90 ಡಿಗ್ರಿಯಲ್ಲಿಟ್ಟಾಗ ಅದರ ನೆರಳು ಎರಡು ನಿಮಿಷದವರೆಗೆ ಕಾಣುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರತಿದಿನ ಸೂರ್ಯ ಮಧ್ಯಾಹ್ನ ನೆತ್ತಿ ಮೇಲೆ ಬರುತ್ತಾನೆ. ಆದರೆ, ಇಂದು ಯಾವುದೇ ಲಂಬ ರೀತಿಯ ವಸ್ತು/ವ್ಯಕ್ತಿಗಳ ನೆರಳು ಗೋಚರವಾಗದು. ಭೂಮಿ ಗೋಳಾಕಾರದಲ್ಲಿದೆ. ಸೂರ್ಯನ ಕಿರಣಗಳು ಮಧ್ಯಾಹ್ನ ಸಮಭಾಜಕದಲ್ಲಿ ಮಾತ್ರ ಬೀಳುತ್ತವೆ. ಈ ನೆರಳು ಉತ್ತರ/ದಕ್ಷಿಣ ದಿಕ್ಕಿಗೆ ಬೀಳುವುದಿಲ್ಲ. ಸೂರ್ಯನ ಪಥವು ಉತ್ತರದ ಚಲನೆಯಲ್ಲಿ 6 ತಿಂಗಳು ಉತ್ತರಾಭಿಮುಖವಾಗಿರುತ್ತದೆ. ದಕ್ಷಿಣದ ಚಲನೆಯಲ್ಲಿ 6 ತಿಂಗಳುಗಳು ದಕ್ಷಿಣಾಭಿಮುಖವಾಗಿರುತ್ತದೆ.
ಈ ಸಮಯದಲ್ಲಿ ಭೂಮಿಯ ಸುಮಾರು 23.5 ಡಿಗ್ರಿಗಳಷ್ಟು ಓರೆಯಾಗಿರುತ್ತದೆ. ಆದ್ದರಿಂದ ಸೂರ್ಯ ಮಧ್ಯಾಹ್ನದ ಸಮಯದಲ್ಲಿ ಸಮಭಾಜಕದ ಉತ್ತರ ಮತ್ತು ದಕ್ಷಿಣದ ಎಲ್ಲ ಡಿಗ್ರಿಗಳಲ್ಲಿ ನೇರವಾಗಿ ಮೇಲಕ್ಕೆ ಹೋಗುತ್ತಾನೆ. ಶೂನ್ಯ ನೆರಳಿನ ದಿನವನ್ನು ಪ್ರತಿ ವರ್ಷದಲ್ಲಿ ಎರಡು ಬಾರಿ ಮಾತ್ರ ಕಾಣಬಹುದು. ಒಮ್ಮೆ ಸೂರ್ಯನ ಉತ್ತರ ಚಲನೆ ಮತ್ತೊಮ್ಮೆ ಸೂರ್ಯದ ದಕ್ಷಿಣ ಚಲನೆಯಲ್ಲಿ ಕೌತುಕ ವೀಕ್ಷಿಸಬಹುದು. ಏಪ್ರಿಲ್-ಮೇ ಮತ್ತು ಆಗಸ್ಟ್ ಸಮಯದಲ್ಲಿ ಶೂನ್ಯ ನೆರಳಿನ ದಿನ ಕಾಣುತ್ತದೆ.
ನೀವು ಕೂಡ ಸಾಕ್ಷಿಯಾಗಿ:ಖಗೋಳದ ಕೆಲವು ಅದ್ಬುತ ಘಟನೆಗಳಲ್ಲಿ ಒಂದಾಗಿರುವ ಇಂತಹ ಶೂನ್ಯ ನೆರಳಿನ ದಿನಕ್ಕೆ ನಿಮ್ಮನ್ನು ನೀವು ಪ್ರಯೋಗಕ್ಕೆ ಒಡ್ಡಿಕೊಳ್ಳಬಹುದು. ಹೈದರಾಬಾದ್ ನಗರವಾಸಿಗಳು ಮಧ್ಯಾಹ್ನದ ಮೇಲೆ ತಿಳಿಸಿದ ಸಮಯಕ್ಕೆ ಬಿಸಿಲಿಗೆ ನಿಂತಾಗ ನೆರಳು ಗೋಚರವಾಗದೇ ಇರುವುದನ್ನು ಸ್ವತಃ ತಿಳಿಯಿರಿ.
ಕಳೆದ ತಿಂಗಳು ಬೆಂಗಳೂರಿಗರಿಗೆ ಗೋಚರ:ಶೂನ್ಯ ನೆರಳ ದಿನಕ್ಕೆ ಕಳೆದ ತಿಂಗಳು ಬೆಂಗಳೂರಿಗರು ಸಾಕ್ಷಿಯಾಗಿದ್ದರು. ಏಪ್ರಿಲ್ 25ರಂದು ಮಧ್ಯಾಹ್ನ 12.17ಕ್ಕೆ ಶೂನ್ಯ ನೆರಳಿನ ದಿನ ಗೋಚರವಾಗಿತ್ತು. ಈ ದಿನದಂದು ಎರಡು ನಿಮಿಷಗಳ ಕಾಲ ಯಾವುದೇ ನೆರಳು ಕಂಡುಬಂದಿರಲಿಲ್ಲ. ಶೂನ್ಯ ನೆರಳ ದಿನ ಉಷ್ಣವಲಯದ ನಡುವಿನ ಸ್ಥಳಗಳಿಗೆ ಸೀಮಿತ. ಭಾರತದಲ್ಲಿ ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿ ವೃತ್ತದಲ್ಲಿ ವಾಸಿಸುವ ಮಂದಿ ಇಂತಹ ಕೌತುಕ ಸಮಯವನ್ನು ಅನುಭವಿಸಬಹುದು. ರಾಂಚಿ ಸೇರಿದಂತೆ ದೇಶದ ಕೆಲವು ಪ್ರದೇಶಗಳು ಈ ಕೌತುಕದಿಂದ ಹೊರಗುಳಿದಿವೆ.
ಇದನ್ನೂ ಓದಿ: ಬಟ್ಟೆ ಮೇಲೆ ಮೆಹಂದಿ ಡಿಸೈನ್ ಮಾಡಿ ದಾಖಲೆ ನಿರ್ಮಿಸಿದ ಯುವತಿ..!