ನವದೆಹಲಿ: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಇಂದು ದೇಶಾದ್ಯಂತ 'ಚಕ್ಕಾ ಜಾಮ್' (ಹೆದ್ದಾರಿ ಬಂದ್)ಗೆ ಕರೆ ಕೊಟ್ಟಿವೆ.
ಶನಿವಾರ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ರೈತ ಸಂಘಟನೆಗಳು ಹೆದ್ದಾರಿಗಳನ್ನು ಬಂದ್ ಮಾಡಲಿವೆ. ಪ್ರತಿಭಟನೆಗೆ ಸಮೀಪವಿರುವ ಪ್ರದೇಶಗಳಲ್ಲಿ ಇಂಟರ್ನೆಟ್ ನಿಷೇಧ ಮತ್ತು ಅಧಿಕಾರಿಗಳು ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿರುವ ರೈತ ಸಂಘಗಳು, ದೇಶಾದ್ಯಂತ ಇಂದು 'ಚಕ್ಕಾ ಜಾಮ್' ಘೋಷಣೆ ಮಾಡಿವೆ.
ಮೂರು ಗಂಟೆಗಳ ಕಾಲ ನಡೆಯುವ 'ಚಕ್ಕ ಜಾಮ್' ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕೈತ್ ಈಗಾಗಲೆ ತಿಳಿಸಿದ್ದಾರೆ. ದೆಹಲಿ ಹೊರತುಪಡಿಸಿ ದೇಶಾದ್ಯಂತ ರಸ್ತೆ ಬಂದ್ ನಡೆಯಲಿದೆ. ಈ ಮೂರು ಗಂಟೆಗಳ ಕಾಲ ಜಾಮ್ನಲ್ಲಿ ಸಿಲುಕುವ ಜನರಿಗೆ ಆಹಾರ ಮತ್ತು ನೀರನ್ನು ರೈತರು ಒದಗಿಸಿಕೊಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.