ಕರ್ನಾಟಕ

karnataka

ETV Bharat / bharat

ಇಂದು ಬೆಳಗಾವಿ ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ ನಿಲುವಳಿ ಸೂಚನೆ ಮಂಡನೆ - ಬೆಳಗಾವಿ ಮುನ್ಸಿಪಲ್ ಕಾರ್ಪೊರೇಷನ್

ಬೆಳಗಾವಿ ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ ಇಂದು ನಿಲುವಳಿ ಸೂಚನೆ - ವಿಧಾನಸಭೆಯಲ್ಲಿ ಕರ್ನಾಟಕ ವಿರುದ್ಧ ಖಂಡನಾ ನಿರ್ಣಯ - ನಿಲುವಳಿ ಮಂಡಿಸಲಿರುವ ಸಿಎಂ ಏಕನಾಥ್​ ಶಿಂಧೆ

today-cm-will-move-a-reso
ಗಡಿ ವಿವಾದ ಬಗ್ಗೆ ಮಹಾರಾಷ್ಟ್ರ ನಿಲುವಳಿ ಮಂಡನೆ

By

Published : Dec 27, 2022, 10:41 AM IST

ನಾಗ​ಪುರ (ಮಹಾರಾಷ್ಟ್ರ):ಕರ್ನಾಟಕ ಮತ್ತು ಮಹಾರಾಷ್ಟ್ರ ಮಧ್ಯೆ ಬೆಳಗಾವಿ ಗಡಿ ವಿವಾದ ತಾರಕಕ್ಕೇರಿದೆ. ರಾಜ್ಯ ಸರ್ಕಾರ ನಿಲುವಳಿ ಮಂಡಿಸಿದ ಬೆನ್ನಲ್ಲೇ, ಮಹಾರಾಷ್ಟ್ರ ಸರ್ಕಾರ ಕೂಡಾ ಇಂದು ಖಂಡನಾ ನಿರ್ಣಯ ಮಂಡಿಸಲು ಸಜ್ಜಾಗಿದೆ. ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಅವರು ಗಡಿ ನಿಲುವಳಿ ಸೂಚನೆ ಮಂಡಿಸಲಿದ್ದಾರೆ. ಮರಾಠಿಗರಿಗೆ ಸೇರಿದ ಒಂದಿಂಚು ಜಾಗವನ್ನೂ ನಾವು ಬಿಟ್ಟುಕೊಡುವುದಿಲ್ಲ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಹೇಳಿದ್ದಾರೆ.

ಅಧಿವೇಶನದಲ್ಲಿ ಗಡಿ ನಿಲುವಳಿ ಮಂಡನೆ ಬಗ್ಗೆ ವಿಪಕ್ಷಗಳು ಹರಿಹಾಯ್ದ ಬಳಿಕ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಉಭಯ ಸದನಗಳಲ್ಲಿ ಬಹುಮತದಿಂದ ನಿರ್ಣಯ ಅಂಗೀಕಾರವಾಗಲಿದೆ. ಬೆಳಗಾವಿ ಮರಾಠಿಗರಿಗೆ ನ್ಯಾಯ ಒದಗಿಸಿಕೊಡಲಾಗುವುದು ಎಂದು ಮಹಾರಾಷ್ಟ್ರ ಡಿಸಿಎಂ ತಿಳಿಸಿದ್ದಾರೆ. ವಿವಾದಿತ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಲು ಆಗ್ರಹಿಸಿದ ಮಾಜಿ ಸಿಎಂ ಮತ್ತು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದ ಫಡ್ನವೀಸ್​, 2.5 ವರ್ಷ ಅಧಿಕಾರದಲ್ಲಿದ್ದವರು ಗಡಿ ವಿಚಾರದಲ್ಲಿ ಏನೂ ಮಾಡಲಿಲ್ಲ. ಈಗ ಅವರು ಮಾತನಾಡುತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗಡಿ ವಿವಾದ ಆರಂಭವಾಗಿಲ್ಲ. ಈ ಹಿಂದಿನಿಂದಲೂ ಇದ್ದ ವಿವಾದಕ್ಕೆ ಅಂತ್ಯ ಕಾಣಿಸಲು ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದರು.

ಭಾಷಾವಾರು ಪ್ರಾಂತ್ಯ ರಚನೆಯ ಸಮಸ್ಯೆ ಶುರುವಾಯಿತು. ವರ್ಷಗಟ್ಟಲೆ ಇದು ನಡೆದುಕೊಂಡೇ ಬರುತ್ತಿದೆ. ಅಂದಿನಿಂದ ಇಂದಿನವರೆಗೆ ಸರ್ಕಾರ ನಡೆಸಿದವರು ಗಡಿ ವಿವಾದವನ್ನು ನಮ್ಮಿಂದಲೇ ಆರಂಭವಾಯಿತು ಎಂದು ಬಿಂಬಿಸುತ್ತಿದ್ದಾರೆ. ಗಡಿ ವಿವಾದದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಪ್ರತಿ ಬಾರಿಯೂ ಸರ್ಕಾರದ ಜೊತೆ ನಿಂತಿದ್ದೇವೆ. ಇದು ಮರಾಠಿಗರ ಬದುಕಿನ ಸಮಸ್ಯೆಯಾಗಿದೆ. ಗಡಿ ವಿವಾದದಲ್ಲಿ ಯಾರೂ ಕೂಡ ರಾಜಕೀಯ ಮಾಡಬಾರದು. ಗಡಿ ಭಾಗದ ಜನರು ಇಡೀ ಮಹಾರಾಷ್ಟ್ರ ತಮ್ಮೊಂದಿಗೆ ಇದೆ ಎಂಬುದನ್ನು ಭಾವಿಸಬೇಕು ಎಂದರು.

ಕೇಂದ್ರಾಡಳಿತ ಪ್ರದೇಶ ಮಾಡಿ ಉದ್ಧವ್​ ಠಾಕ್ರೆ:‘ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ’ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸುವಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಗಡಿ ವಿವಾದದ ಕುರಿತು ರಾಜ್ಯ ವಿಧಾನಸಭೆಯಲ್ಲಿ ಮಾತನಾಡುವ ವೇಳೆ ಠಾಕ್ರೆ ಈ ಮಾತು ಹೇಳಿದ್ದಾರೆ.

ಇದು ಕೇವಲ ಭಾಷೆ ಮತ್ತು ಗಡಿಯ ವಿಚಾರವಲ್ಲ. ಇದು ಮಾನವೀಯತೆಯ ವಿಚಾರ. ಮರಾಠಿ ಮಾತನಾಡುವ ಜನರು ಗಡಿ ಗ್ರಾಮಗಳಲ್ಲಿ ತಲೆತಲಾಂತರಗಳಿಂದ ವಾಸಿಸುತ್ತಿದ್ದಾರೆ. ಅವರ ದಿನನಿತ್ಯದ ಭಾಷೆ ಮತ್ತು ಜೀವನಶೈಲಿ ಎಲ್ಲ ಮರಾಠಿಯಾಗಿದೆ. ಗಡಿ ವಿವಾದವು ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇದ್ದು, ಕರ್ನಾಟಕ ಆಕ್ರಮಿತ ಮಹಾರಾಷ್ಟ್ರವನ್ನು ಕೇಂದ್ರ ಸರ್ಕಾರವು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಬೇಕು ಎಂದು ಹೇಳಿದ್ದರು.

ಏಕನಾಥ್​ ಶಿಂಧೆ ಈ ಬಗ್ಗೆ ಮಾತನಾಡಿದ್ದಾರಾ?: ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಈ ವಿಷಯದ ಬಗ್ಗೆ ಏನಾದರೂ ಮಾತನಾಡಿದ್ದಾರೆಯೇ, ಅಥವಾ ಕರ್ನಾಟಕ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆಯೇ ಎಂದು ಅವರು ಕೇಳಿದರು. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿದೆ. ಅಲ್ಲಿಯ ತನಕ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಹೇಳಲಾಗಿದೆ. ಆದರೂ ಗಡಿಯಲ್ಲಿನ ವಾತಾವರಣವನ್ನು ಹಾಳು ಮಾಡುತ್ತಿರುವವರು ಯಾರು ಎಂದು ಕರ್ನಾಟಕ ಸರ್ಕಾರವನ್ನು ಗುರಿಯಾಗಿಸಿ ಉದ್ಧವ್‌ ಪ್ರಶ್ನೆ ಮಾಡಿದರು.

ಕರ್ನಾಟಕ ಸರ್ಕಾರ, ಗಡಿ ಸಮಸ್ಯೆ ಇತ್ಯರ್ಥವಾಗಿದ್ದು, ನೆರೆ ರಾಜ್ಯಕ್ಕೆ ಒಂದಿಂಚು ಭೂಮಿಯನ್ನೂ ನೀಡುವುದಿಲ್ಲ ಎಂದು ಹೇಳಿದೆ. ಈ ಬಗ್ಗೆ ಕೇಂದ್ರದ ನಡೆಯನ್ನು ಠಾಕ್ರೆ ಪ್ರಶ್ನಿಸಿದರು. ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯನ್ನು ನಾವು ಬಯಸುತ್ತೇವೆ. ಎರಡೂ ಸದನಗಳ ಸದಸ್ಯರು "ಕೇಸ್ ಫಾರ್ ಜಸ್ಟೀಸ್" ಚಲನಚಿತ್ರವನ್ನು ವೀಕ್ಷಿಸಬೇಕು. ಜೊತೆಗೆ ಮಹಾಜನ್ ಆಯೋಗದ ವರದಿಯನ್ನು ಓದಬೇಕು ಎಂದು ಠಾಕ್ರೆ ಹೇಳಿದರು.

ಬೆಳಗಾವಿ ಮುನ್ಸಿಪಲ್ ಕಾರ್ಪೊರೇಷನ್ ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸುವ ನಿರ್ಣಯವನ್ನು ಅಂಗೀಕರಿಸಿದಾಗ, ಕಾರ್ಪೊರೇಷನ್​ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಅದೇ ರೀತಿ ಮಹಾರಾಷ್ಟ್ರದ ಕೆಲವು ಗ್ರಾಮ ಪಂಚಾಯಿತಿಗಳು ತೆಲಂಗಾಣದೊಂದಿಗೆ ವಿಲೀನಕ್ಕೆ ಒತ್ತಾಯಿಸಿದ್ದು, ಈ ಗ್ರಾಮ ಪಂಚಾಯತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಂದೆ ಸರ್ಕಾರಕ್ಕೆ ಧೈರ್ಯವಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಓದಿ:ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಭರದ ತಯಾರಿ: ಇವತ್ತು ಹೈ ವೋಲ್ಟೇಜ್ ಸಭೆ

ABOUT THE AUTHOR

...view details