ಛಿಂದ್ವಾರಾ, ಮಧ್ಯಪ್ರದೇಶ:ಕೆಲವರು ತಮ್ಮ ಮಕ್ಕಳನ್ನು ಮೊದಲ ಬಾರಿಗೆ ತಬ್ಬಿಕೊಂಡರೆ, ಕೆಲವರು ಅನೇಕ ವರ್ಷಗಳ ನಂತರ ತಮ್ಮ ಕುಡಿಗಳನ್ನು ನೋಡಿ ಸಂತಸದಿಂದ ಕಣ್ಣೀರು ಸುರಿಸುತ್ತಿರುವ ಪ್ರಸಂಗವೊಂದು ಜೈಲಿನಲ್ಲಿ ಕಂಡು ಬಂದಿತು. ಇನ್ನು ಚಿಕ್ಕ ಮಕ್ಕಳು ತಮ್ಮ ತಂದೆಯ ಮಡಿಲಲ್ಲಿ ಕುಳಿತು ನಿರಾಳವಾಗಿದ್ದರು. ಈ ಮನಕಲುಕುವ ಕ್ಷಣಗಳು ಛಿಂದ್ವಾರಾ ಜಿಲ್ಲಾ ಕಾರಾಗೃಹದೊಳಗೆ ಕಂಡುಬಂದಿತು. ಛಿಂದ್ವಾರಾ ಜಿಲ್ಲಾ ಕಾರಾಗೃಹದ ಆಡಳಿತವು ಕೈದಿಗಳಿಗೆ ತಮ್ಮ ಮಕ್ಕಳನ್ನು ಭೇಟಿ ಮಾಡಲು ಕಾರ್ಯಕ್ರಮ ಆಯೋಜಿಸಿತ್ತು, ಅದಕ್ಕೆ ಸ್ಪರ್ಶ್ ಮೀಟ್ ಎಂದು ಹೆಸರಿಸಲಾಗಿತ್ತು.
ಪೋಷಕರು ಮಕ್ಕಳನ್ನು ಹೊಂದಿರುವುದು ಸಾಮಾನ್ಯ. ಕೆಲ ಸಂದರ್ಭದಲ್ಲಿ ಅಪರಾಧ ಅಥವಾ ಇತರ ಕಾರಣಗಳಿಂದ ಆ ಮಕ್ಕಳ ತಂದೆ ಜೈಲಿಗೆ ಹೋಗಬೇಕಾಗುತ್ತದೆ. ಆದರೆ ಅದರ ಭಾರವು ಅವರ ಮಕ್ಕಳು ಪಡೆಯುವ ಪ್ರೀತಿ ಮೇಲೆ ಬೀಳುತ್ತದೆ. ಹೀಗಾಗಿ ಜೈಲಿನಲ್ಲಿ ತಮ್ಮ ಮಕ್ಕಳನ್ನು ಭೇಟಿ ಮಾಡುವ ಅವಕಾಶವೊಂದನ್ನು ಜೈಲಿನ ಆಡಳಿತ ಅಧಿಕಾರಿಯೊಬ್ಬರು ಕಲ್ಪಿಸಿದ್ದಾರೆ. ಈ ವಿಶಿಷ್ಟ ಪ್ರಯೋಗಕ್ಕೆ ‘ಸ್ಪರ್ಶ ಸಭೆ’ ಕಾರ್ಯಕ್ರಮ ಎಂದು ಹೆಸರಿಸಲಾಗಿದೆ. ಪ್ರಯೋಗಾರ್ಥವಾಗಿ ಸುಮಾರು 70 ಮಕ್ಕಳು ತಮ್ಮ ತಂದೆಯರನ್ನು ಭೇಟಿಯಾಗಿ ಪ್ರೀತಿ ಹಂಚಿಕೊಂಡರು. ಜೈಲಿನಲ್ಲಿ ಸ್ಪರ್ಶ ಸಭೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಜೈಲು ಅಧೀಕ್ಷಕ ಯಜುವೇಂದ್ರ ವಾಘಮಾರೆ ತಿಳಿಸಿದ್ದಾರೆ.
3ರಿಂದ 13 ವರ್ಷದೊಳಗಿನ ಮಕ್ಕಳಿಗೆ ಜೈಲಿಗೆ ಪ್ರವೇಶ:ಜಿಲ್ಲಾ ಕಾರಾಗೃಹದ ಆಡಳಿತ ಮಂಡಳಿಯು 3 ವರ್ಷದಿಂದ 13 ವರ್ಷದ ಮಕ್ಕಳಿಗೆ ತಂದೆಯನ್ನು ಭೇಟಿಯಾಗಲು ಜೈಲಿನೊಳಗೆ ಎಂಟ್ರಿ ನೀಡಿತ್ತು. ಎಲ್ಲ ಮಕ್ಕಳು ತಮ್ಮ ತಂದೆಗಳನ್ನ ಭೇಟಿಯಾಗಲು ವಿವಿಧ ರೀತಿಯಲ್ಲಿ ಉಡುಗೊರೆಗಳೊಂದಿಗೆ ಜೈಲು ತಲುಪಿದ್ದರು. ಪ್ರಯೋಗಾರ್ಥವಾಗಿ ಈ ಸಭೆಯನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮ ಯಶಸ್ವಿಯಾದರೆ ತಿಂಗಳಿಗೊಮ್ಮೆ ಮಕ್ಕಳು ತಂದೆಯೊಂದಿಗೆ ಸ್ವಲ್ಪ ಸಮಯ ಕಾಲ ಕಳೆಯಬಹುದೆಂದು ಜೈಲು ಅಧೀಕ್ಷಕರು ತಿಳಿಸಿದರು.