ಹಲ್ದ್ವಾನಿ (ಉತ್ತರಾಖಂಡ): ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ನಾಗರಹಾವಿನಿಂದ ಕಚ್ಚಿಸಿ ಕೊಲೆ ಮಾಡಿಸಿದ ಬೆಚ್ಚಿಬೀಳಿಸಿದ ಘಟನೆ ಉತ್ತರಾಖಂಡದ ಹಲ್ದ್ವಾನಿ ಪಟ್ಟಣದಲ್ಲಿ ಬಯಲಾಗಿದೆ. ಹೊಸ ಗೆಳೆಯನ ಜೊತೆಗಿನ ಪ್ರೀತಿಗೆ ಅಡ್ಡಿಯಾದ ಕಾರಣಕ್ಕೆ ಹಳೆ ಪ್ರಿಯಕರನ ಪ್ರಾಣವನ್ನು ಪ್ರೇಯಸಿ ತೆಗೆದಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇಲ್ಲಿನ ರಾಮ್‌ಬಾಗ್‌ನ ರಾಂಪುರ ರಸ್ತೆಯ ನಿವಾಸಿ 32 ವರ್ಷದ ಅಂಕಿತ್ ಚೌಹಾಣ್ ಎಂಬುವರು ಜುಲೈ 15ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಆಟೋ ಶೋರೂಂ ಉದ್ಯಮಿಯಾಗಿದ್ದ ಅಂಕಿತ್ ಮೃತದೇಹವು ತೀನ್ ಪಾನಿ ಬೈಪಾಸ್ ರಸ್ತೆಯಲ್ಲಿ ನಿಲ್ಲಿಸಿದ್ದ ತಮ್ಮ ಕಾರಿನ ಹಿಂದಿನ ಸೀಟಿನಲ್ಲಿ ಪತ್ತೆಯಾಗಿತ್ತು. ಮೊದಲಿಗೆ ಉಸಿರುಗಟ್ಟುವಿಕೆಯಿಂದ ಮೃತಪಟ್ಟಿರುವ ಸಾಧ್ಯತೆ ಎಂದು ನಂಬಲಾಗಿತ್ತು.
ಮೃತದೇಹದ ಮರಣೋತ್ತರ ಪರೀಕ್ಷೆ ವೇಳೆ ಅಂಕಿತ್‌ನ ಎರಡೂ ಪಾದಗಳಲ್ಲಿ ವಿಷಪೂರಿತ ಹಾವು ಕಚ್ಚಿದ ಗುರುತುಗಳು ಕಂಡು ಬಂದಿದ್ದವು. ಇದು ಕುಟುಂಬಸ್ಥರು ಆತಂಕ ಹಾಗೂ ಅನುಮಾನಕ್ಕೂ ಕಾರಣವಾಗಿತ್ತು. ಹೀಗಾಗಿ ಸಹೋದರಿ ಇಶಾ ಚೌಹಾಣ್, ಸಹೋದರ ಅಂಕಿತ್ ಚೌಹಾಣ್ ಸಾವಿನ ಬಗ್ಗೆ ಪೊಲೀಸರಿಗೆ ದೂರು ದಾಖಲಿಸಿದ್ದರು. ಈ ದೂರಿನಲ್ಲಿ ಅಂಕಿತ್ಗೆ ಗೋರಪದವ್ ನಿವಾಸಿ ಮಾಹಿ ಎಂಬ ಯುವತಿಯೊಂದಿಗೆ ಸ್ನೇಹ ಇತ್ತು. ಮೃತದೇಹ ಪತ್ತೆಯಾದ ಒಂದು ದಿನಕ್ಕೂ ಮುನ್ನ ಎಂದರೆ ಜುಲೈ 14ರಂದು ಮಾಹಿಯನ್ನು ಅಂಕಿತ್ ಭೇಟಿ ಮಾಡಿದ್ದ. ಅವಳ ಭೇಟಿ ನಂತರವೇ ಅಂಕಿತ್ ಮೃತಪಟ್ಟಿದ್ದಾನೆ. ಇದೊಂದು ಯೋಜಿತ ಕೊಲೆ ಎಂದು ಇಶಾ ಚೌಹಾಣ್ ಆರೋಪಿಸಿದ್ದರು.
ಪಿತೂರಿ ಬಯಲಿಗೆ:ಅಂಕಿತ್ ಚೌಹಾಣ್ ಸಹೋದರಿ ಇಶಾ ಈ ದೂರಿನ ಮೇರೆಗೆ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದರು. ಈ ವೇಳೆ ಶಂಕಿತ ಯುವತಿ ಮಹಿಗೆ ದೀಪ್ ಕಂಡ್ಪಾಲ್ ಎಂಬ ಮತ್ತೊಬ್ಬ ಯುವಕನೊಂದಿಗೆ ಪ್ರೀತಿ ಅರಳುತ್ತಿತ್ತು. ಆದರೆ, ಈ ಸಂಬಂಧದಲ್ಲಿ ಮಧ್ಯಪ್ರವೇಶಿಸಿದ್ದರಿಂದ ಅಂಕಿತ್ ಚೌಹಾಣ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು ಎಂಬುದು ಬೆಳಕಿಗೆ ಬಂದಿದೆ.
ವಿಷಕಾರಿ ಹಾವಿನಿಂದ ಕಚ್ಚಿಸಿ ಕೊಲೆ: ಹೊಸ ಪ್ರಿಯಕರನಿಗಾಗಿ ಅಂಕಿತ್ ಚೌಹಾಣ್‌ನ ಕೊಲೆಗೆ ನಿರ್ಧರಿಸಿದ್ದ ಪ್ರೇಯಸಿ ಖತರ್ನಾಕ್ ಪ್ಲಾನ್ ಸಿದ್ಧಪಡಿಸಿದ್ದಳು. ಹಾವು ಹಿಡಿಯುವವರ ಸಹಾಯದಿಂದ ನಾಗರಹಾವಿನ ಮೂಲಕ ಕಚ್ಚಿ ಸಾಯಿಸುವ ಯೋಜನೆ ರೂಪಿಸಿದ್ದಳು. ಅದರಂತೆ, ಜುಲೈ 14ರಂದು ಅಂಕಿತ್ ಚೌಹಾಣ್ ಅವರನ್ನು ಮಹಿ ತನ್ನ ನಿವಾಸಕ್ಕೆ ಆಹ್ವಾನಿಸಿದ್ದಳು. ಅದೇ ದಿನ ಮನೆಗೆ ತನ್ನ ಪ್ಲಾನ್ ಪ್ರಕಾರ, ಹಾವು ಹಿಡಿಯುವವರರನ್ನು ಮನೆಗೆ ಕರೆಸಿ, ವಿಷಪೂರಿತ ಹಾವಿನಿಂದ ಕಚ್ಚಿಸಿದ್ದಾಳೆ. ಇದರಿಂದ ಪ್ರಜ್ಞಾಹೀನ ಸ್ಥಿತಿಗೆ ಜಾರಿದ್ದ ಅಂಕಿತ್ರನ್ನು ಅದೇ ದಿನ ರಾತ್ರಿ ಕಾರಿನಲ್ಲಿ ಕೂರಿಸಿ ಗೋಲಾ ಬೈಪಾಸ್‌ನ ರಸ್ತೆ ಬದಿ ಕಾರು ನಿಲ್ಲಿಸಿ ಪರಾರಿಯಾಗಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ತಲೆ ಮರೆಸಿಕೊಂಡಿರುವ ಹಂತಕರು: ಪೊಲೀಸ್ ತನಿಖೆಯಲ್ಲಿ ಇಷ್ಟೆಲ್ಲ ಅಂಶಗಳು ಬಹಿರಂಗವಾದ ಬಳಿಕ ಪೊಲೀಸರು ಹಾವು ತಂದಿದ್ದ ರಾಮನಾಥ್ ಎಂಬಾತನನ್ನು ಬಂಧಿಸಿದ್ದಾರೆ. ಈ ಸಂಚಿನಲ್ಲಿ ಮಹಿಯ ಮನೆಗೆಲಸದಾಕೆ ಸಹ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಪ್ರಮುಖ ಆರೋಪಿಗಳಾದ ಪ್ರೇಯಸಿ ಮಹಿ, ದೀಪ್ ಕಂಡ್ಪಾಲ್ ಮತ್ತು ಸೇವಕಿ ಸೇರಿ ಮೂವರು ತಲೆಮರೆಸಿಕೊಂಡಿದ್ದು, ಇವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ:7 ತಿಂಗಳ ಮಗು ಸೇರಿ ಒಂದೇ ಕುಟುಂಬದ ನಾಲ್ವರನ್ನು ಕೊಂದು ಸುಟ್ಟು ಹಾಕಿದ ದುಷ್ಕರ್ಮಿಗಳು!