ಬಂದಾ (ಉತ್ತರ ಪ್ರದೇಶ):ಮನೆಗೆ ಹೊಕ್ಕ ನಾಗರ ಹಾವನ್ನು ಓಡಿಸಲು ಕುಟುಂಬಸ್ಥರು, ಹಸುವಿನ ಸಗಣಿಯ ಬೆರಣಿಯನ್ನು ಹೊತ್ತಿಸಿ, ಅದರ ಹೊಗೆಯಿಂದ ನಾಗರ ಹಾವನ್ನು ಓಡಿಸಲು ಪ್ರಯತ್ನ ಮಾಡಿತ್ತು. ಆದರೆ ಬೆರಣಿಗೆ ಹೊತ್ತಿದ ಕಿಡಿ, ಬೆಂಕಿಯ ಜ್ವಾಲೆಯಾಗಿ ಮಾರ್ಪಟ್ಟು ಮನೆಗೆ ಬೆಂಕಿ ಆವರಿಸಿದ್ದರಿಂದ ಸುಟ್ಟು ಕರಕಲಾಗಿದೆ. ಈ ಬಗ್ಗೆ ಉತ್ತರ ಪ್ರದೇಶದ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ನಡೆದಿದ್ದು ಹೇಗೆ?:ಬಂದಾ ಜಿಲ್ಲೆಯಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಕುಟುಂಬದವರು ತಮ್ಮ ಮನೆಯಲ್ಲಿ ನಾಗರ ಹಾವು ಇರುವುದನ್ನು ಕಂಡಿದ್ದಾರೆ. ಇದರಿಂದ ಭಯಭೀತರಾದ ಅವರು, ನಾಗರ ಹಾವನ್ನು ಓಡಿಸಲು ಬೆರಣಿಯನ್ನು ಹಚ್ಚಿದ್ದಾರೆ. ಆದರೆ, ಬೆರಣಿಗೆ ಹಚ್ಚಿದ ಬೆಂಕಿ ಕಿಡಿ ದಗ್ಗನೇ ಹೊತ್ತಿ ಮನೆಗೆಲ್ಲ ಬೆಂಕಿ ವ್ಯಾಪಿಸಿಕೊಂಡಿದೆ.
ಇದರಿಂದಾಗಿ ಮನೆ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಹೀಗೆ ಅಚಾನಕ್ ಆದ ಘಟನೆಯಿಂದ ಮನೆಯಲ್ಲಿದ್ದ ನಗದು, ಚಿನ್ನಾಭರಣಗಳು ಮತ್ತು ಹಲವಾರು ಕ್ವಿಂಟಲ್ ಧಾನ್ಯಗಳು ಸುಟ್ಟು ಬೂದಿಯಾಗಿವೆ. ತಾನೊಂದು ಬಗೆದರೆ ದೈವವೊಂದು ಬಗೆದೀತು ಎಂಬಂತೆ, ಹಾವು ಓಡಿಸಲು ಕುಟುಂಬದವರು ಹೊಗೆ ಹಾಕಿದ್ದರು. ಆದರೆ ಅದು ಬೆಂಕಿಯ ಜ್ವಾಲೆಯಾಗಿ ಪ್ರಜ್ವಲಿಸಿ ಇಡೀ ಮನೆಯನ್ನೇ ಆಪೋಷನ ಪಡೆದಿದೆ. ಇದರಿಂದಾಗಿ ಮನೆಯವರು ದಿಕ್ಕು ತೋಚದಂತಾಗಿದ್ದಾರೆ.