ಚೆನ್ನೈ (ತಮಿಳುನಾಡು):ಈಶಾನ್ಯ ಮಾನ್ಸೂನ್ ಮಳೆ ತಮಿಳುನಾಡಿನಲ್ಲಿ ತೀವ್ರಗೊಳ್ಳುತ್ತಿರುವ ಕಾರಣ, ತಮಿಳುನಾಡಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಈ ರಾಜ್ಯದಲ್ಲಿ, ಮುಂಬರುವ 3 ದಿನಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕನಿಷ್ಠ 5 ಸಾವು, 120 ಮನೆಗಳಿಗೆ ಹಾನಿ:
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಇತ್ತೀಚೆಗೆ ತಮಿಳುನಾಡಿನಲ್ಲಿ ಸುರಿದ ಭಾರಿ ಮಳೆಯಿಂದ ಕನಿಷ್ಠ 5 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಕೆಕೆಎಸ್‌ಎಸ್‌ಆರ್ ರಾಮಚಂದ್ರ ತಿಳಿಸಿದ್ದಾರೆ. ತಿರುವಣ್ಣಾಮಲೈನಲ್ಲಿ ಇಬ್ಬರು ಹಾಗೂ ರಿಯಲೂರು, ದಿಂಡಿಗಲ್ ಮತ್ತು ಶಿವಗಂಗಾ ಜಿಲ್ಲೆಗಳಲ್ಲಿ ಮೂರು ಮಂದಿ, 152 ಜಾನುವಾರುಗಳು ಸಾವನ್ನಪ್ಪಿವೆ. 681 ಗುಡಿಸಲು ಹಾಗೂ 120 ಮನೆಗಳಿಗೆ ಹಾನಿಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ:
ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ಶನಿವಾರ ರೆಡ್ ಅಲರ್ಟ್ ಘೋಷಿಸಲಾಗಿದೆ. ಚೆನ್ನೈ, ಚೆಂಗಲ್ಪಟ್ಟು, ತಿರುನಲ್ವೇಲಿ, ತೂತುಕುಡಿ, ರಾಮನಾಥಪುರಂ, ಕರಿಕಲ್, ನಾಗಪಟ್ಟಣಂ, ಪುದುಕೊಟ್ಟೈ ಮತ್ತು ಮೈಲಾಡುತುರೈ, ಪುದುಚೇರಿ ಮತ್ತು ಕಾರೈಕಾಲ್‌ನಲ್ಲಿ ನ.29ರ ವರೆಗೆ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.
ಕನ್ಯಾಕುಮಾರಿ ಮತ್ತು ಶ್ರೀಲಂಕಾದ ಕೆಲವು ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತ ಸಂಭವಿಸುವುದರಿಂದ, ಈ ಕೆಳಗಿನ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಬಹುದು ಎಂದು ಮೂನ್ಸೂಚನೆ ನೀಡಲಾಗಿದೆ.