ಚೆನ್ನೈ: ಪ್ರಾಧ್ಯಾಪಕರೊಬ್ಬರಿಗೆ ಆನ್‌ಲೈನ್ ವಂಚಕನೊಬ್ಬ ಕೆಲಸ ಕೊಡಿಸುವುದಾಗಿ ಹೇಳಿ ಅವರಿಂದ 23.5 ಲಕ್ಷ ರೂಪಾಯಿ ಹಣ ತೆಗೆದುಕೊಂಡು ವಂಚಿಸಿರುವ ಘಟನೆ ತಮಿಳುನಾಡಿನ ತಿರುಚ್ಚಿನಲ್ಲಿ ನಡೆದಿದೆ.
ಸೌದಿ ಅರೇಬಿಯಾದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ ಪ್ರೇಮ್ ನವಾಸ್, ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದರು. ನಿರುದ್ಯೋಗಿಯಾಗಿದ್ದ ಅವರು ಹುದ್ದೆ ಕಳೆದುಕೊಂಡ ನಂತರ ತಿರುಚ್ಚಿ ಜಿಲ್ಲೆಯ ಮುಸ್ರಿ ತಾಲೂಕಿನ ತಿರುಮುರುಗನ್ ನಗರಕ್ಕೆ ಬಂದಿದ್ದರು. ಬಳಿಕ ಆನ್‌ಲೈನ್ ಜಾಬ್ ಸೈಟ್‌ಗಳ ಮೂಲಕ ವಿದೇಶದಲ್ಲಿ ಹೊಸ ಉದ್ಯೋಗಾವಕಾಶಕ್ಕಾಗಿ ಹುಡುಕಾಟ ನಡೆಸುತ್ತಿದ್ದರು ಎಂದು ತಿರುಚ್ಚಿ ಪೊಲೀಸರು ತಿಳಿಸಿದ್ದಾರೆ.
ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಹುದ್ದೆಗೆ ಮಾಸಿಕ 6 ಲಕ್ಷ ರೂ. ವೇತನ ನೀಡುವುದಾಗಿ ಭರವಸೆ ನೀಡಿ, ವ್ಯಕ್ತಿಯೊಬ್ಬ ನನ್ನನ್ನು ಸಂಪರ್ಕಿಸಿದ್ದ ಎಂದು ಪ್ರೇಮ್ ನವಾಸ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ವಿಷಯವಾಗಿ ವಂಚಕ ಸ್ಕೈಪ್ ಮೂಲಕ ಅವರೊಂದಿಗೆ ಮಾತನಾಡಿದ್ದನಂತೆ.