ಚೆನ್ನೈ :ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದ ಎಲ್ಲಾ ಶಾಸಕಾಂಗ ಪಕ್ಷಗಳ ಸಭೆಯಲ್ಲಿ ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಹೊಸ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಪ್ರಯತ್ನವನ್ನು ಖಂಡಿಸಲಾಗಿದೆ. ಇದಕ್ಕೆ ಅನುಮತಿ ನೀಡದಂತೆ ಕೇಂದ್ರ ಸರ್ಕಾರವನ್ನು ಸರ್ವಪಕ್ಷಗಳು ಒತ್ತಾಯಿಸಿವೆ. ಇಂದು ನಡೆದ ಸಭೆಯಲ್ಲಿ ಬಿಜೆಪಿ ಸೇರಿದಂತೆ ತಮಿಳುನಾಡಿನ 13 ಪಕ್ಷದ ಪ್ರತಿನಿಧಿಗಳು ಭಾಗವಹಿಸಿದ್ದರು. ಹಾಗೂ ಸಭೆಯಲ್ಲಿ ಮೂರು ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ನಿರ್ಣಯ-1 :
ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಕಾವೇರಿಯ ಅಧೀನ ರಾಜ್ಯಗಳ ಪೂರ್ವಾನುಮತಿ ಇಲ್ಲದೆ ಮೇಕೆದಾಟುವಿನಲ್ಲಿ ಯಾವುದೇ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಬಾರದು. ಅದನ್ನು ಮೀರಿ, ಅಲ್ಲಿ ಅಣೆಕಟ್ಟು ನಿರ್ಮಿಸಲು ಕರ್ನಾಟಕ ಸರ್ಕಾರದ ಪೂರ್ಣ ಪ್ರಮಾಣದ ಪ್ರಯತ್ನಗಳು ಖಂಡನೀಯ.
ಈ ಯೋಜನೆಯು ತಮಿಳುನಾಡು ರೈತರ ನೀರಿನ ಮೂಲದ ಮೇಲೂ ಪರಿಣಾಮ ಬೀರುತ್ತದೆ. ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಇಂತಹ ಪ್ರಯತ್ನ ಭಾರತದ ಸಂವಿಧಾನಕ್ಕೆ ಸವಾಲಾಗಿದೆ. ಆದ್ದರಿಂದ, ಯೋಜನೆಗೆ ಸಂಬಂಧಿಸಿದ ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳು ಯೋಜನೆಗೆ ಯಾವುದೇ ಅನುಮತಿ ನೀಡಬಾರದು.