ಚೆನ್ನೈ(ತಮಿಳುನಾಡು): ಈಗಾಗಲೇ ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿರುವ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರ ಪುತ್ರ, ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಿಂದಿ ಭಾಷೆ ಕುರಿತ ಹೇಳಿಕೆಯನ್ನು ಖಂಡಿಸಿರುವ ಉದಯನಿಧಿ ಸ್ಟಾಲಿನ್, ಭಾರತದ ಭಾಷಾ ವೈವಿಧ್ಯತೆಯನ್ನು ದುರ್ಬಲಗೊಳಿಸುವ ಪ್ರಯತ್ನ ಎಂದು ಟೀಕಿಸಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ಅವರು ಹಿಂದಿ ಭಾಷೆಯನ್ನು ಭಾರತದ ಏಕೀಕರಣದ ಶಕ್ತಿ ಎಂದು ಹೇಳಿದ್ದರು. ಈ ಬಗ್ಗೆ ವಾಗ್ದಾಳಿ ನಡೆಸಿರುವ ಸಚಿವ ಉದಯನಿಧಿ, ದೇಶಾದ್ಯಂತ ಕೆಲವೇ ಕೆಲವು ರಾಜ್ಯಗಳಲ್ಲಿ ಹಿಂದಿಯನ್ನು ಪ್ರಧಾನ ಭಾಷೆಯಾಗಿ ಮಾತನಾಡುತ್ತಾರೆ. ಭಾರತದ ನಿಜವಾದ ಶಕ್ತಿ ಇಲ್ಲಿನ ವಿವಿಧ ಭಾಷೆ, ಸಂಸ್ಕೃತಿ, ಸಂಪ್ರದಾಯಗಳಲ್ಲಿ ಅಡಗಿದೆ ಎಂದು ಹೇಳಿದರು.
ಇದು ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆ ಮಾಡುವ ಪರೋಕ್ಷ ಪ್ರಯತ್ನ ಎಂಬುದನ್ನು ನಾವು ಅರಿಯಬಹುದು. ಭಾರತದಲ್ಲಿರುವ ಪ್ರತಿಯೊಂದು ಭಾಷೆಗೂ ಸಮಾನ ಮನ್ನಣೆ ಮತ್ತು ಗೌರವ ಇದೆ. ಈ ಭಾಷೆಗಳನ್ನು ಪ್ರಾದೇಶಿಕ ಭಾಷೆಗಳು ಎಂದು ಹೇಳುವ ಮೂಲಕ ಅದರ ಐತಿಹಾಸಿಕ ಪ್ರಾಮುಖ್ಯತೆ ಕುಗ್ಗಿಸುವ ಕೆಲಸವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.