ಚೆನ್ನೈ(ತಮಿಳುನಾಡು):ಕೊರೊನಾ, ಒಮಿಕ್ರಾನ್ ಮಧ್ಯೆ ರಾಜ್ಯದ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ನಡೆಸಲು ತಮಿಳುನಾಡು ಸರ್ಕಾರ ಒಪ್ಪಿಗೆ ನೀಡಿದೆ. ಆದರೆ ಕೊರೊನಾ ನಿಯಮಗಳನ್ನು ಪಾಲನೆ ಮಾಡುವುದೂ ಸೇರಿದಂತೆ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸಿದೆ.
ಪೊಂಗಲ್ ಸಂಭ್ರಮಾಚರಣೆ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆಯೋಜನೆ ಮಾಡಲಾಗುತ್ತದೆ. ಆದರೆ, ಈ ಸಲದ ಸ್ಪರ್ಧೆಯಲ್ಲಿ ಭಾಗಿಯಾಗುವ ಗೂಳಿಗಳ ಮಾಲೀಕರು ಹಾಗೂ ಸಹಾಯಕರು ಎರಡು ಡೋಸ್ ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳಲೇಬೇಕಿದೆ. ಇದರ ಜೊತೆಗೆ, ಸ್ಪರ್ಧೆಯಲ್ಲಿ ಭಾಗಿಯಾಗುವುದಕ್ಕೂ 48 ಗಂಟೆಗಳ ಮುಂಚಿತವಾಗಿ ಕೋವಿಡ್ ಆರ್ಟಿ-ಪಿಸಿಆರ್ ಪರೀಕ್ಷೆ ಮಾಡಿಸಿ, ಪ್ರಮಾಣಪತ್ರ ನೀಡುವಂತೆ ಸೂಚನೆ ನೀಡಲಾಗಿದೆ.