ಥೇಣಿ (ತಮಿಳುನಾಡು):ಕೇರಳದಿಂದ ತಮಿಳುನಾಡಿಗೆ ಬಂದು ಅಟ್ಟಹಾಸ ಮೆರೆದಿದ್ದ ಅರಿಕೊಂಬನ್ ಆನೆಯನ್ನು ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ. ಕೇರಳ ರಾಜ್ಯದ ಮುನ್ನಾರ್ ಪ್ರದೇಶದಲ್ಲಿ ಅಟ್ಟಹಾಸ ಮೆರೆದಿದ್ದ ಅರಿಕೊಂಬನ್ ಹೆಸರಿನ ಆನೆಯನ್ನು ಕೆಲ ದಿನಗಳ ಹಿಂದಷ್ಟೇ ಅರಣ್ಯ ಇಲಾಖೆ ಕುಮ್ಕಿ ಆನೆಯ ಸಹಾಯದಿಂದ ಸೆರೆ ಹಿಡಿದಿತ್ತು. ಸದ್ಯ ಅರಿಕೊಂಬನ್ ಆನೆಗೆ ಅರಿವಳಿಕೆ ನೀಡಿ 4 ಕುಮ್ಕಿ ಆನೆಗಳ ಸಹಾಯದಿಂದ ಪೆರಿಯಾರ್ ಹುಲಿ ಅರಣ್ಯಧಾಮಕ್ಕೆ ಕರೆತರಲಾಗಿದೆ. ಇದು ತಮಿಳುನಾಡು ಮತ್ತು ಕೇರಳದ ಗಡಿಯಲ್ಲಿನ ಅರಣ್ಯ ಪ್ರದೇಶವಾಗಿದೆ.
ಇದಕ್ಕೂ ಮುನ್ನ ಮೇ 27ರಂದು ಬೆಳಗ್ಗೆ ಏಕಾಏಕಿ ಕಂಪಂ ನಗರ ಜನ ವಸತಿ ಪ್ರದೇಶಕ್ಕೆ ನುಗ್ಗಿದ ಅರಿಕೊಂಬನ್ ಆನೆ ಪುಂಡಾಟಿಕೆ ಮೆರೆದಿತ್ತು. ಬಳಿಕ ಮುಂಜಾಗ್ರತ ಕ್ರಮವಾಗಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಸಾರ್ವಜನಿಕರಿಂದ ಆನೆಗೆ ತೊಂದರೆಯಾಗದಂತೆ ಕಂಪಂ ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ಬಳಿಕ ಅರಿಕೊಂಬನ್ ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯೋನ್ಮುಖವಾಗಿತ್ತು. ಅಲ್ಲದೇ ಆನೆಯ ಕೊರಳಿಗೆ ಅಳವಡಿಸಿರುವ ರೇಡಿಯೋ ಕಾಲರ್ ಸಾಧನದ ಮೂಲಕ ಅರಣ್ಯ ಇಲಾಖೆಯು ಅರಿಕೊಂಬನ್ ಮೇಲೆ ನಿರಂತರ ನಿಗಾ ಇರಿಸಿತ್ತು. ಈ ವೇಳೆ ಕೆಲ ದಿನಗಳ ಹಿಂದೆ ಕಂಪಂ ಕಣಿವೆ ಪ್ರದೇಶದಲ್ಲಿ ಅಡ್ಡಾಡುತ್ತಿದ್ದ ಆನೆ ಕಾಮಯ ಕೌಂಟನಪಟ್ಟಿ ಬಳಿಯ ಚನ್ಮುಕಾ ನದಿ ಅಣೆಕಟ್ಟಿನಲ್ಲಿ ಇರುವ ಮಾಹಿತಿ ಅರಣ್ಯ ಇಲಾಖೆಗೆ ಲಭ್ಯವಾಗಿತ್ತು.
ಭಾನುವಾರ ರಾತ್ರಿ ಚಿನ್ನಾ ಔವುಲಾಪುರಂ ಬಳಿಯ ಪೆರುಮಾಳ್ ದೇವಸ್ಥಾನದ ಬೆಟ್ಟದಲ್ಲಿ ಅರಿಕೊಂಬನ್ ಆನೆ ಸಂಚರಿಸಿತ್ತು. ಅರಿವಳಿಕೆ ಚುಚ್ಚುಮದ್ದು ನೀಡಿ ಆನೆಯನ್ನು ಸೆರೆಹಿಡಿಯಲು ಸೂಕ್ತ ಸ್ಥಳವಾಗಿದೆ ಎಂದು ನಿಗಾ ವಹಿಸಿದ್ದ ಅರಣ್ಯ ಇಲಾಖೆ ಕಂಬಂ ಅರಣ್ಯ ಇಲಾಖೆಯಿಂದ ಕುಮ್ಕಿ ಆನೆಗಳನ್ನು ಕರೆ ತಂದು ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.