ಚೆನ್ನೈ: ದೇಶದಲ್ಲಿ ಮಂಕಿಪಾಕ್ಸ್ ಹರಡುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ರಾಜ್ಯದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ರೋಗಕ್ಕೆ ಸಂಬಂಧಿಸಿದಂತೆ ತನ್ನ ಕಣ್ಗಾವಲನ್ನು ಹೆಚ್ಚಿಸುವಂತೆ ತಮಿಳುನಾಡು ಆರೋಗ್ಯ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ.
ಸಾರ್ವಜನಿಕ ಆರೋಗ್ಯ ಮತ್ತು ಪ್ರಿವೆಂಟಿವ್ ಮೆಡಿಸಿನ್ ನಿರ್ದೇಶಕ ಟಿ ಎಸ್ ಸೆಲ್ವವಿನಾಯಗಂ ಮಾತನಾಡಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ವಿದೇಶಗಳಿಂದ ಆಗಮಿಸಿದ ನಂತರ ಆರೋಗ್ಯ ತಪಾಸಣೆ ಕೈಗೊಳ್ಳಬೇಕು. ಅನಾರೋಗ್ಯ ಇರುವ ಪ್ರಯಾಣಿಕರನ್ನು ಪ್ರತ್ಯೇಕಿಸಿ ಅವರ ರಕ್ತದ ಮಾದರಿಗಳನ್ನು ಪಡೆದು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಬೇಕು ಎಂದು ಹೇಳಿದರು.
ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ), ಚೆನ್ನೈ, ಕೊಯಮತ್ತೂರು, ತಿರುಚಿರಾಪಳ್ಳಿ, ಸೇಲಂ, ಮಧುರೈ ಮತ್ತು ಟುಟಿಕೋರಿನ್‌ನ ವಿಮಾನ ನಿಲ್ದಾಣಗಳಿಗೆ ಯಾವುದೇ ಅಂತಾರಾಷ್ಟ್ರೀಯ ಪ್ರಯಾಣಿಕರು ಜ್ವರ, ತಲೆನೋವು, ಸ್ನಾಯು ನೋವು ಮತ್ತು ಬಳಲಿಕೆಯಿಂದ ಕಂಡು ಬಂದಲ್ಲಿ ಅವರನ್ನು ಕಟ್ಟುನಿಟ್ಟಾಗಿ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು ಎಂದು ಸೂಚಿಸಿದರು.