ಚೆನ್ನೈ (ತಮಿಳುನಾಡು):ಮೇಕೆದಾಟು ಯೋಜನೆಗೆ ನೆರೆಯ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ. ಮೇಕೆದಾಟು ಸಂಬಂಧ ನಮ್ಮ ಜಲಸಂಪನ್ಮೂಲ ಸಚಿವ ದುರೈಮುರುಗನ್ ನೇತೃತ್ವದ ನಾಯಕರ ನಿಯೋಗ ಶೀಘ್ರದಲ್ಲೇ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ಕಾವೇರಿ ನದಿಗೆ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ವಿರೋಧಿಸಿ ತಮಿಳುನಾಡು ನಿಯೋಗ ದೆಹಲಿಗೆ ಭೇಟಿ ನೀಡಲಿದೆ. ತಮಿಳುನಾಡು ಜನರ ಧ್ವನಿಗೆ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ ಎಂದು ಸಿಎಂ ಸ್ಟಾಲಿನ್ ತಿಳಿಸಿದ್ದಾರೆ. ಅಲ್ಲದೇ, ಮೇಕೆದಾಟು ಅಣೆಕಟ್ಟಿನ ವಿಷಯ ಸಂಬಂಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಚರ್ಚಿಸಬಹುದು ಎಂಬ ಪ್ರಾಧಿಕಾರದ ಅಧ್ಯಕ್ಷ ಎಚ್.ಕೆ.ಹಲ್ದಾರ್ ಹೇಳಿಕೆಗೂ ಸ್ಟಾಲಿನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.