ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 51ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಂಸದ ಶಶಿ ತರೂರ್, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಅನೇಕ ಗಣ್ಯರು ಅವರಿಗೆ ಶುಭ ಹಾರೈಸಿದ್ದಾರೆ.
‘ನಮ್ಮ ನಾಯಕ, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರ ಸತ್ಯಸಂಧತೆ, ನ್ಯಾಯನಿಷ್ಠುರತೆ ಮತ್ತು ರಾಜಿ ಇಲ್ಲದ ಜನಪರ ಕಾಳಜಿಯ ಗುಣಗಳು ಖಂಡಿತ ಫಲ ನೀಡಲಿವೆ. ನಿಮ್ಮ ಹೋರಾಟದ ಹಾದಿಯಲ್ಲಿ ಸದಾ ಹೆಜ್ಜೆ ಹಾಕುವ ಶಪಥದೊಂದಿಗೆ ನಿಮಗೆ ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು’ ಎಂದು ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
‘ಆರೋಗ್ಯ, ಸಂತಸ ಮತ್ತು ಯಶಸ್ಸಿಗಾಗಿ ಶುಭ ಹಾರೈಕೆಗಳು. ಪ್ರತಿಕೂಲ ಸಮಯದಲ್ಲಿ ಜನಸಾಮಾನ್ಯರ ಧ್ವನಿಯಾಗಿ ಅವರೊಂದಿಗೆ ನಿಂತು ಅವರ ಹಕ್ಕುಗಳಿಗಾಗಿ ಹೋರಾಡುವ ನಿಮ್ಮ ಕಾರ್ಯ ಮುಂದುವರಿಯಲಿ. ಹುಟ್ಟುಹಬ್ಬದ ಶುಭಾಶಯ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿಯವರು ಮಾನವೀಯ ಮತ್ತು ಅಂತರ್ಗತ ಸಮಾಜಕ್ಕೆ ಬದ್ಧವಾಗಿರುವ ಉತ್ತಮ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಇಂದು ಅವರ ಜನ್ಮದಿನ, ಅವರು ನೂರ್ಕಾಲ ಚೆನ್ನಾಗಿರಲಿ ಎಂದು ಹಾರೈಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಟ್ವೀಟ್ ಮಾಡಿದ್ದಾರೆ.