ಕೊಯಮತ್ತೂರು(ತಮಿಳುನಾಡು): ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ ದೊರೈಸಾಮಿ ನಗರದಲ್ಲಿರುವ ಪಡಿತರ ಅಂಗಡಿಯಲ್ಲಿ ಕೇವಲ ಕರುಣಾನಿಧಿ ಹಾಗೂ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಫೋಟೋ ಹಾಕಲಾಗಿತ್ತು. ಇದನ್ನು ಕಂಡು ಅಂಗಡಿಯೊಳಗೆ ತೆರಳಿದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಅಳವಡಿಕೆ ಮಾಡಿದ್ದಾರೆ. ಇದರ ಜೊತೆಗೆ, ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ(PMGKAY) ಅಡಿಯಲ್ಲಿ ಪಡಿತರ ನೀಡುತ್ತಿರುವ ಬಗ್ಗೆ ಅಲ್ಲಿನ ಜನರಿಗೆ ಮಾಹಿತಿ ತಿಳಿ ಹೇಳಿದ್ದಾರೆ.
ಈ ಪ್ರದೇಶದಲ್ಲಿನ ಖಾಸಗಿ ಕಾಲೇಜೊಂದರಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಅಣ್ಣಾಮಲೈ ಭಾಗಿಯಾಗಲು ತೆರಳುತ್ತಿದ್ದರು. ಈ ವೇಳೆ ಪಡಿತರ ಅಂಗಡಿಯೊಳಗೆ ಹೋಗಿದ್ದಾರೆ. ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ನೇತು ಹಾಕಿದ್ದಾರೆ. ಅಂಗಡಿ ಮೇಲೆ ರಾಜ್ಯ ಸರ್ಕಾರ ನಿಯಂತ್ರಣ ಸಾಧಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಬಡವರಿಗೆ ಉಚಿತವಾಗಿ ಪಡಿತರ ವಿತರಣೆ ಮಾಡ್ತಿದ್ದು, ಕರುಣಾನಿಧಿ, ಸಿಎಂ ಸ್ಟಾಲಿನ್ ಜೊತೆಗೆ ಮೋದಿ ಅವರ ಭಾವಚಿತ್ರ ಇರುವುದು ಕಡ್ಡಾಯ ಎಂದಿದ್ದಾರೆ. ಅಣ್ಣಾಮಲೈ ಅವರ ಈ ನಡೆ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ.