ತಿರುಪುರ್ (ತಮಿಳುನಾಡು):ತಮಿಳುನಾಡಿನ ತಿರುಪುರ್ ಬಳಿ ಬಿಹಾರ ಮೂಲದ ಕಾರ್ಮಿಕನೊಬ್ಬ ರೈಲಿಗೆ ಸಿಲುಕಿ ಸಾವಿಗೀಡಾಗಿದ್ದರಿಂದ ವಲಸೆ ಕಾರ್ಮಿಕರು ಇಲ್ಲಿನ ರೈಲ್ವೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಸಾವಿಗೀಡಾದ ಕಾರ್ಮಿಕ ಸಂಜೀವ್ ಕುಮಾರ ಎಂದು ಗುರುತಿಸಲಾಗಿದೆ. ತಿರುಪುರ್ ಜಿಲ್ಲೆಯ ನಿಟ್ವೇರ್ ಕಂಪನಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಮಾರ್ಚ್ 2 ರಂದು ಮಧ್ಯರಾತ್ರಿ ಸಂಜೀವ್ ಕುಮಾರ್ ತಿರುಪುರ್ ಬಳಿಯ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದ್ದರು.
ತಕ್ಷಣ ಎಚ್ಚೆತ್ತ ರೈಲ್ವೆ ಪೊಲೀಸರು ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದರು. ನಂತರ ವಲಸೆ ಕಾರ್ಮಿಕನ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ತಿರುಪುರ್ ಜಿಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರ್ಪಡೆ ಮಾಡಿದ್ದಾರೆ.
ತಿರುಪುರದಲ್ಲಿ ನಿಟ್ವೇರ್ ಕಂಪನಿ ಹಾಗೂ ಇತರ ಸಂಬಂಧಿತ ಉದ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ತಿರುಪುರ್ ರೈಲ್ವೆ ಪೊಲೀಸ್ ಠಾಣೆಯ ಎದುರು ಬಂದು ಜಮಾಯಿಸಿದ್ದರು. ಸಂಜೀವ್ ಕುಮಾರ್ ಅವರ ಮೊಬೈಲ್ ಫೋನ್ ಮತ್ತು ವಾಹನಗಳು ನಾಪತ್ತೆಯಾಗಿವೆ ಎಂದು ಪ್ರತಿಭಟನಾ ನಿರತ ಕಾರ್ಮಿಕರು ಆರೋಪಿಸಿದರು. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ರೈಲ್ವೆ ಪೊಲೀಸರು ಭರವಸೆ ನೀಡಿದ್ದ ಬಳಿಕ ಕಾರ್ಮಿಕರು ಪ್ರತಿಭಟನೆ ಹಿಂಪಡೆದರು.
ಪೊಲೀಸರು ಹೇಳಿದ್ದಿಷ್ಟು:ರಾತ್ರಿ ರೈಲ್ವೆ ಹಳಿ ದಾಟುತ್ತಿದ್ದಾಗ ಸಂಜೀವ್ ಕುಮಾರ್ ಅವರಿಗೆ ಡಿಕ್ಕಿ ಹೊಡೆದಿದೆ. ಮಧ್ಯರಾತ್ರಿ 12.56 ಕ್ಕೆ ತಿರುವನಂತಪುರಂನಿಂದ ಚೆನ್ನೈಗೆ ರೈಲನ್ನು ಚಲಾಯಿಸುತ್ತಿದ್ದ ಕರುಪಸಾಮಿ ನೀಡಿದ ಮಾಹಿತಿಯಂತೆ, ಟ್ರ್ಯಾಕ್ ದಾಟಲು ಪ್ರಯತ್ನಿಸಿದ್ದ ವ್ಯಕ್ತಿಯೊಬ್ಬರಿಗೆ ರಾತ್ರಿ ತಿರುವನಂತಪುರಂನಿಂದ ಚೆನ್ನೈಗೆ ಸಂಚರಿಸುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ ಎಂಬ ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದೆವು. ಆಗ ವಲಸೆ ಕಾರ್ಮಿಕ ಸಂಜೀವ್ ಕುಮಾರ್ ಅವರು ಶವವಾಗಿ ಪತ್ತೆಯಾಗಿದ್ದಾರೆ. ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದೇವು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.