ಚೆನ್ನೈ (ತಮಿಳುನಾಡು) :ಕಾವೇರಿ ನೀರಿಗಾಗಿ ಸುಪ್ರೀಂ ಕೋರ್ಟ್ನಲ್ಲಿ ಹೋರಾಡುತ್ತಿರುವ ತಮಿಳುನಾಡು ಸರ್ಕಾರ ಇದೀಗ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ಆದೇಶದಂತೆ ನೀರು ಬಿಡಲು ಕರ್ನಾಟಕ ಸರ್ಕಾರಕ್ಕೆ, ಕೇಂದ್ರ ಸರ್ಕಾರ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯವೊಂದನ್ನು ಸರ್ವಾನುಮತದಿಂದ ಸೋಮವಾರ ಅಂಗೀಕರಿಸಿದೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಂಡಿಸಿದ ನಿರ್ಣಯಕ್ಕೆ ಸರ್ವಪಕ್ಷಗಳು ಒಪ್ಪಿಗೆ ನೀಡಿವೆ. ಕೃಷಿಯ ಮೂಲಧಾರವಾಗಿರುವ ಕಾವೇರಿ ನೀರನ್ನು ಪಡೆಯುವ ಮೂಲಕ, ರೈತರ ಬದುಕು ರಕ್ಷಿಸುವ ನಿರ್ಣಯ ಇದಾಗಿದೆ ಎಂದು ಸರ್ಕಾರ ಹೇಳಿದೆ.
ಒಗ್ಗಟ್ಟಿನ ಮೂಲಕ ನೀರು ಪಡೆಯೋಣ:ವಿಧಾನಸಭೆ ಕಲಾಪದಲ್ಲಿ ಆಡಳಿತಾರೂಢ ಡಿಎಂಕೆ, ಪ್ರಮುಖ ಪ್ರತಿಪಕ್ಷ ಎಐಎಡಿಎಂಕೆ ಸೇರಿದಂತೆ ಎಲ್ಲಾ ಪಕ್ಷಗಳು ಒಗ್ಗಟ್ಟಾಗಿ ಧ್ವನಿಯೆತ್ತುವ ಮೂಲಕ ಕರ್ನಾಟಕದಿಂದ ನೀರು ಪಡೆಯೋಣ ಎಂಬ ನಿರ್ಣಯ ತೆಗೆದುಕೊಂಡವು. ನೀರಿನ ಸಮಸ್ಯೆಯ ಬಗ್ಗೆ ನಾವೆಲ್ಲರೂ ತುರ್ತಾಗಿ ಒಂದಾಗುವ ಅಗತ್ಯವಿದೆ. ಕರ್ನಾಟಕದಿಂದ ನೀರನ್ನು ಪಡೆದುಕೊಳ್ಳುವಲ್ಲಿ ಇರುವ ಸವಾಲುಗಳನ್ನು ಒಗ್ಗಟ್ಟಿನ ಹೋರಾಟದ ಮೂಲಕ, ತನ್ನ ನ್ಯಾಯಯುತ ಪಾಲನ್ನು ಪಡೆಯಬೇಕಾಗಿದೆ ಎಂಬುದನ್ನು ಸದನ ಒಪ್ಪಿಕೊಂಡಿತು.
ಜಲಸಂಪನ್ಮೂಲಗಳ ಸಮಾನ ಹಂಚಿಕೆಯ ಬಗ್ಗೆ ಕರ್ನಾಟಕದ ರಾಷ್ಟ್ರೀಯ ಪಕ್ಷಗಳ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರಬೇಕು. ಈ ಬಗ್ಗೆ ಸಂಸತ್ತಿನಲ್ಲಿ ಸಂಸದರು ಧ್ವನಿ ಎತ್ತಬೇಕು ಎಂದು ವಿಪಕ್ಷ ನಾಯಕ ಪಳನಿಸ್ವಾಮಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸ್ಟಾಲಿನ್, ಡಿಎಂಕೆ ಸಂಸದರು ಸಂಸತ್ತಿನಲ್ಲಿ ಕಾವೇರಿ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಟೀಕೆ, ಟಿಪ್ಪಣಿಗಳ ಬದಲಾಗಿ ಎಲ್ಲ ಪಕ್ಷಗಳು ಒಂದಾಗಿ ನೀರು ಪಡೆದುಕೊಳ್ಳಲು ಹೋರಾಟ ನಡೆಸಬೇಕಿದೆ ಎಂದು ಹೇಳಿದರು.