ಕೋಲ್ಕತಾ(ಪಶ್ಚಿಮ ಬಂಗಾಳ): ಜಿದ್ದಾಜಿದ್ದಿನ ಕಣವಾಗಿದ್ದ ಪಶ್ಚಿಮ ಬಂಗಾಳದ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಜಯ ಸಾಧಿಸಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ), ಇನ್ನೆರಡು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಗೆಲುವನ್ನು ಬಹುತೇಕ ಖಚಿತಪಡಿಸಿಕೊಳ್ಳುವತ್ತ ಸಾಗಿದೆ. ಇದರಿಂದ ರಾಷ್ಟ್ರೀಯ ಪಕ್ಷ ಬಿಜೆಪಿಗೆ ಮುಖಭಂಗವಾಗಿದೆ.
ಕೂಚ್ ಬೆಹರ್ ಜಿಲ್ಲೆಯ ದಿನ್ಹಾಟಾ, ಉತ್ತರ 24 ಪರಗಣ ಜಿಲ್ಲೆಯ ಖಾರ್ದಹ ವಿಧಾನಸಭಾ ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್ನ ಅಭ್ಯರ್ಥಿಗಳೇ ಜಯ ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದ್ದು, ನಾಡಿಯಾ ಜಿಲ್ಲೆಯ ಶಾಂತಿಪುರ, ದಕ್ಷಿಣ 24 ಪರಗಣ ಜಿಲ್ಲೆಯ ಗೊಸಾಬಾ ಕ್ಷೇತ್ರಗಳಲ್ಲಯೂ ಟಿಎಂಸಿ ಮುನ್ನಡೆಯಲ್ಲಿದ್ದು, ಗೆಲುವು ಖಚಿತ ಎನ್ನಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಎಂಸಿ ಅಧಿನಾಯಕಿ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿನ ಅಭಿವೃದ್ಧಿಗೆ ಜನರು ಮತ ಹಾಕಿದ್ದಾರೆ. ದ್ವೇಷಪೂರಿತ ರಾಜಕಾರಣವನ್ನು ತಿರಸ್ಕರಿಸಿದ್ದಾರೆ ಎಂದು ಟ್ವೀಟ್ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ, ಎಲ್ಲಾ ವಿಜೇತ ಅಭ್ಯರ್ಥಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಇದು ಜನರ ಗೆಲುವು. ಬಂಗಾಳ ಯಾವಾಗಲೂ ದ್ವೇಷ ರಾಜಕೀಯಕ್ಕಿಂತ ಅಭಿವೃದ್ಧಿ ಮತ್ತು ಏಕತೆಗೆ ಆದ್ಯತೆ ನೀಡುತ್ತದೆ ಎಂಬುದನ್ನು ಈ ಫಲಿತಾಂಶ ಸೂಚಿಸುತ್ತದೆ. ಜನರ ಆಶೀರ್ವಾದದೊಂದಿಗೆ ಬಂಗಾಳವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಭರವಸೆಯನ್ನು ನಾನು ನೀಡುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಪತಿಗೆ ಅಶ್ಲೀಲ ಚಿತ್ರ ಜಾಲತಾಣಗಳ ಚಟ: ಕೋರ್ಟ್ ಮೆಟ್ಟಿಲೇರಿದ ಪತ್ನಿ