ಗೋಸಾಬಾ,(ಪಶ್ಚಿಮ ಬಂಗಾಳ) :ಕೇಂದ್ರ ಸರ್ಕಾರ ಆಂಫಾನ್ ಚಂಡಮಾರುತದ ಪರಿಹಾರಕ್ಕೆ ಪಶ್ಚಿಮ ಬಂಗಾಳಕ್ಕೆ ಕಳುಹಿಸಿದ್ದ ಅನುದಾನವನ್ನು ಪರಿಹಾರ ಕಾರ್ಯಗಳಿಗೆ ಬಳಸದೇ ತೃಣಮೂಲ ಕಾಂಗ್ರೆಸ್ ಜನರಿಗೆ ವಂಚಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಗೊಸಾಬಾದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ತೃಣಮೂಲ ಕಾಂಗ್ರೆಸ್ನದು 'ಅನುದಾನ ಕತ್ತರಿ' ಸಂಸ್ಕೃತಿ ಎಂದು ಟೀಕಿಸಿದ್ದು, ಮಮತಾ ಬ್ಯಾನರ್ಜಿ ಮತ್ತು ಸೋದರಳಿಯನ ಕಂಪನಿ ಆಂಫಾನ್ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ನೀಡಿದ್ದ ಅನುದಾನವನ್ನು ವಂಚಿಸಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದರೆ ಅನುದಾನ ದುರ್ಬಳಕೆ ತನಿಖೆಗಾಗಿ ಒಂದು ಸಮಿತಿ ರಚಿಸುವುದಾಗಿ ಅಮಿತ್ ಶಾ ಹೇಳಿದ್ದು, ಜನಸಾಮಾನ್ಯರಿಗೆ ಪರಿಹಾರ ಹಣ ತಲುಪಿಲ್ಲ ಎಂದು ದೂರಿದ್ದಾರೆ.
ಇದನ್ನೂ ಓದಿ:ಕಾನೂನುಬದ್ಧ ಕುಡಿಯುವ ವಯೋಮಿತಿ 25 ರಿಂದ 21ಕ್ಕೆ ಇಳಿಸಿದ ಕೇಜ್ರಿವಾಲ್ ಸರ್ಕಾರ
ಆಂಫಾನ್ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂಪಾಯಿಗಳನ್ನು ನೀಡಿತ್ತು. ನಿಮಗೇನಾದರೂ ಒಂದು ಪೈಸೆ ಪರಿಹಾರ ದೊರಕಿದೆಯೇ?, ಹಣ ಎಲ್ಲಿ ಹೋಯಿತು. ಅಧಿಕಾರಕ್ಕೆ ಬಂದ ನಂತರ ಎಲ್ಲವನ್ನೂ ತನಿಖೆ ನಡೆಸಲಾಗುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಆಂಫಾನ್ ಚಂಡಮಾರುತ ಪರಿಹಾರ ಮಾತ್ರವಲ್ಲದೇ ಕೇಂದ್ರ ಸರ್ಕಾರದ ಯೋಜನೆಗಳನ್ನು ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರಲಾಗುತ್ತಿಲ್ಲ ಎಂದು ಅಮಿತ್ ಶಾ ಇದೇ ವೇಳೆ ಕಿಡಿಕಾರಿದ್ದಾರೆ.
ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿಯಾಗಿ ಸೋದರಳಿಯನನ್ನು ನೇಮಿಸಲು ಮಮತಾ ಬ್ಯಾನರ್ಜಿ ಪ್ರಯತ್ನಿಸುತ್ತಿದ್ದಾರೆ. ಮುಂದಿನ ಸಿಎಂ ಆಗಿ ಮಮತಾ ಸೋದರಳಿಯ ನೇಮಕವಾಗಬೇಕೇ? ಬೇಡವಾದಲ್ಲಿ ಬಿಜೆಪಿಗೆ ಮತ ಹಾಕಿ ಎಂದು ಅಮಿತ್ ಶಾ ಮನವಿ ಮಾಡಿದ್ದಾರೆ.