ನವದೆಹಲಿ:Mamata Banerjee as PM Candidate.. 2024ರ ಲೋಕಸಭೆ ಚುನಾವಣೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ತೃಣಮೂಲ ಕಾಂಗ್ರೆಸ್ (TMC) ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ವ್ಯಂಗ್ಯವಾಡಿದ್ದಾರೆ.
ನಮ್ಮ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆಗಿರುತ್ತಾರೆ. ಮಮತಾ ಬ್ಯಾನರ್ಜಿ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳಲು ವಿಪಕ್ಷಗಳು ಸಿದ್ಧವೇ?, ಇದನ್ನು ಮೊದಲು ಅವರು ನಿರ್ಧಾರ ಮಾಡಿಕೊಳ್ಳಲಿ ಎಂದು ಸುಕಾಂತ ಮಜುಂದಾರ್ ಹೇಳಿದ್ದಾರೆ.
ರಾಜ್ಯದ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸುವ ಸಲುವಾಗಿ ಮಮತಾ ಬ್ಯಾನರ್ಜಿ ದೆಹಲಿಗೆ ಭೇಟಿ ನೀಡಿ, ಹಲವು ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುವ ವೇಳೆ ಸುಕಾಂತ ಮಜುಂದಾರ್ ರೀತಿಯ ಹೇಳಿಕೆ ನೀಡಿದ್ದಾರೆ.
ಮಮತಾ ಬ್ಯಾನರ್ಜಿ ಟಿಎಂಸಿ ಪಕ್ಷವನ್ನು ರಾಷ್ಟ್ರೀಯ ಪಕ್ಷವನ್ನಾಗಿ ರೂಪಿಸಲು ಮುಂದಾಗುತ್ತಿದ್ದಾರೆ. ಇದಕ್ಕಾಗಿಯೇ ತಮ್ಮ ಜನರನ್ನು ವಿವಿಧ ರಾಜ್ಯಗಳಿಗೆ ಕಳುಹಿಸುತ್ತಿದ್ದಾರೆ. ಹಿಂಸಾಚಾರ ರಾಜಕೀಯ ಮಾಡುವ ಮೂಲಕವೇ ಅವರು ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ ಎಂದು ಮಜುಂದಾರ್ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಹಿಂಸೆಯನ್ನು ದೇಶದ ಎಲ್ಲ ಭಾಗಗಳಿಗೆ ಕೊಂಡೊಯ್ಯಲು ಬಯಸುತ್ತಾರೆ. ತನ್ನ ಸರ್ಕಾರದ ಭ್ರಷ್ಟ ಪೊಲೀಸ್ ಅಧಿಕಾರಿಗಳನ್ನು ಮತ್ತು ಮಂತ್ರಿಗಳನ್ನು ಉಳಿಸಲು ಮಮತಾ ಬ್ಯಾನರ್ಜಿ ಧರಣಿ ನಡೆಸಿದ್ದರು ಎಂದು ಸುಕಾಂತ ಮಜುಂದಾರ್ ಆರೋಪಿಸಿದ್ದಾರೆ.
ಇನ್ನು ಸೋಮವಾರ ದೆಹಲಿಗೆ ಆಗಮಿಸಿರುವ ಮಮತಾ ಬ್ಯಾನರ್ಜಿ ಅವರು ನವೆಂಬರ್ 25ರವರೆಗೆ ಅಲ್ಲಿಯೇ ಇರಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ರಾಜ್ಯದ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಇದನ್ನೂ ಓದಿ:ನನ್ನ ಮೊದಲ ಪ್ರೀತಿ ರಾಹುಲ್ ದ್ರಾವಿಡ್: ಬಾಲಿವುಡ್ ನಟಿ ರಿಚಾ ಚಡ್ಡಾ