ಕೋಲ್ಕತ್ತಾ:ದೇಶಾದ್ಯಂತ ಕೋವಿಡ್ ಮಹಾಮಾರಿಗೆ ವ್ಯಾಕ್ಸಿನ್ ನೀಡುವ ಕೆಲಸ ಭರದಿಂದ ನಡೆಯುತ್ತಿದ್ದು, ನರ್ಸ್, ಡಾಕ್ಟರ್ ಈ ಕಾರ್ಯ ಅಚ್ಚುಕಟ್ಟಾಗಿ ಮಾಡ್ತಿದ್ದಾರೆ. ಆದರೆ ಸದ್ಯ ಪಶ್ಚಿಮ ಬಂಗಾಳದಲ್ಲಿ ನಡೆದಿರುವ ಘಟನೆವೊಂದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಹೀಗಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲಾಗುತ್ತಿದೆ.
ಕೋವಿಡ್ ವ್ಯಾಕ್ಸಿನ್ ನೀಡ್ತಿದ್ದ ಸೆಂಟರ್ವೊಂದರಲ್ಲಿ ಮಹಿಳಾ ಟಿಎಂಸಿ ಕೌನ್ಸಿಲರ್ ತಬಸ್ಸುಮ್ ಆರಾ ನರ್ಸ್ ಬದಲಿಗೆ ತಾವೇ ಕೈಯಲ್ಲಿ ಸಿರಿಂಜ್ ಹಿಡಿದುಕೊಂಡು ಲಸಿಕೆ ನೀಡಿದ್ದಾರೆ. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಪಶ್ಚಿಮ ಬಂಗಾಳದ ಕುಲತಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಟಿಎಂಸಿ ಕೌನ್ಸಿಲರ್ ಆಗಿರುವ ತಬಸ್ಸುಮ್ ಅರಾ ಈ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಟಿಎಂಸಿಗೆ ಅದರ ನಾಯಕರ ಮೇಲೆ ಹಿಡತವಿಲ್ಲ. ಯಾವುದೇ ರೀತಿಯ ಅನುಭವವಿಲ್ಲದವರು ಲಸಿಕೆ ನೀಡ್ತಿದ್ದು, ಈ ರೀತಿಯಾದರೆ ಅದನ್ನ ಪಡೆದುಕೊಂಡವರ ಪರಿಸ್ಥಿತಿ ಏನು ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೌನ್ಸಿಲರ್, ನಾನು ಯಾವುದೇ ಲಸಿಕೆ ನೀಡಿಲ್ಲ. ಈ ಪ್ರದೇಶದಲ್ಲಿ ಜನರು ವ್ಯಾಕ್ಸಿನ್ ಪಡೆದುಕೊಳ್ಳಲು ಹಿಂದೇಟು ಹಾಕ್ತಿದ್ದ ಕಾರಣ ನಾನು ಕೈಯಲ್ಲಿ ಸಿರಿಂಜ್ ಹಿಡಿದುಕೊಂಡಿದ್ದೆ ಎಂದಿದ್ದಾರೆ.