ಕೋಲ್ಕತಾ (ಪಶ್ಚಿಮ ಬಂಗಾಳ):ತೃಣಮೂಲ ಕಾಂಗ್ರೆಸ್ನ ಬಂಡಾಯ ನಾಯಕ ಸುವೇಂದು ಅಧಿಕಾರಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜೀನಾಮೆ ಪತ್ರವನ್ನು ಸ್ಪೀಕರ್ಗೆ ಕಳುಹಿಸಿದ್ದಾರೆ.
ಹಿಂದಿನ ತಿಂಗಳಷ್ಟೇ ಸುವೇಂದು ಅಧಿಕಾರಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕ್ಯಾಬಿನೆಟ್ ಸ್ಥಾನದಿಂದ ಕೆಳಗಿಳಿದಿದ್ದರು. ಇದಾದ ನಂತರ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಊಹಾಪೋಹಗಳು ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಹರಿದಾಡುತ್ತಿದ್ದವು.
ಇಂದು ಸುವೇಂದು ಅಧಿಕಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಸೇರ್ಪಡೆ ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಕೆಲವರು ಡಿಸೆಂಬರ್ 18ರಂದು ಸುವೇಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳನ್ನಾಡುತ್ತಿದ್ದಾರೆ.
ಬಿಜೆಪಿಯ ಮೂಲಗಳ ಪ್ರಕಾರ, ಸುವೇಂದು ಅಧಿಕಾರಿ ಡಿಸೆಂಬರ್ 18ರಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ನಂತರ ಡಿಸೆಂಬರ್ 19ರಂದು ಅಮಿತ್ ಶಾ ಎರಡು ದಿನಗಳ ಕಾಲ ಪಶ್ಚಿಮ ಬಂಗಾಳ ಪ್ರವಾಸ ಮಾಡಲಿದ್ದು, ಅವರ ಜೊತೆಯಲ್ಲಿಯೇ ಸುವೇಂದು ಕೂಡಾ ರಾಜ್ಯಕ್ಕೆ ಬರಲಿದ್ದಾರೆ.