ಭುವನೇಶ್ವರ್ (ಒಡಿಶಾ):ಒಡಿಶಾದಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ಈವರೆಗೆ 233 ಪ್ರಾಣಗಳು ಬಲಿಯಾಗಿದ್ದು, ಗಾಯಾಳುಗಳ ಸಂಖ್ಯೆ 1 ಸಾವಿರಕ್ಕೆ ತಲುಪಿದೆ. ಕೋರಮಂಡಲ್ ಎಕ್ಸ್ಪ್ರೆಸ್, ಯಶವಂತರಪುರ ಹೌರಾ ಎಕ್ಸ್ಪ್ರೆಸ್ ಮತ್ತು ಗೂಡ್ಸ್ ನಡುವಿನ ತ್ರಿವಳಿ ಅಪಘಾತ ದೇಶವನ್ನೇ ಬೆಚ್ಚಿಬೀಳಿಸಿದೆ. ಘಟನೆಯ ಹೊಣೆ ಹೊತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ಈಗಾಗಲೇ ಕೇಂದ್ರ ಸರ್ಕಾರ ಮೃತರ ಕುಟುಂಬಗಳಿಗೆ 12 ಲಕ್ಷ ಪರಿಹಾರ ಘೋಷಿಸಿದೆ.
ಹೇಗಾಯ್ತು?:ಶುಕ್ರವಾರ ರಾತ್ರಿ 7 ಗಂಟೆ ಹೊತ್ತಿನಲ್ಲಿ ಈ ದುರಂತ ಸಂಭವಿಸಿದೆ. ಕೋಲ್ಕತ್ತಾದ ಶಾಲಿಮಾರ್ ರೈಲು ನಿಲ್ದಾಣದಿಂದ ಚೆನ್ನೈಗೆ ತೆರಳುತ್ತಿದ್ದ ಕೋರಮಂಡಲ್ ಎಕ್ಸ್ಪ್ರೆಸ್ ಒಡಿಶಾದ ಬಹನಗಾ ರೈಲು ನಿಲ್ದಾಣದಲ್ಲಿ ಸಾಗುತ್ತಿದ್ದಾಗ ಹಳಿ ತಪ್ಪಿದೆ. ಇದರಿಂದ ಪಕ್ಕದ ಹಳಿಯಲ್ಲಿ ನಿಂತಿದ್ದ ರೈಲಿಗೆ ಡಿಕ್ಕಿ ಹೊಡೆದಿದೆ. ರೈಲಿನ 12 ಬೋಗಿಗಳು ಜಾರಿ ಮೂರನೇ ಹಳಿಯ ಮೇಲೆ ಬಿದ್ದಿವೆ. ಇದೇ ವೇಳೆ ಅದೇ ಮಾರ್ಗವಾಗಿ ಎದುರಿನಿಂದ ಬಂದ ಬೆಂಗಳೂರಿನಿಂದ ಹೊರಟಿದ್ದ ಹೌರಾ ಎಕ್ಸ್ಪ್ರೆಸ್ ಹಳಿತಪ್ಪಿ ಬಿದ್ದಿದ್ದ ಬೋಗಿಗಳಿಗೆ ರಭಸವಾಗಿ ಗುದ್ದಿದೆ. ಈ ವೇಳೆ ಈ ರೈಲಿನ 4 ಬೋಗಿಗಳೂ ಹಳಿತಪ್ಪಿವೆ.
ಹಳಿ ತಪ್ಪಿದ ಬೋಗಿಗಳಿಗೆ ರೈಲು ಡಿಕ್ಕಿಯಾದ ಕಾರಣ ಭೀಕರತೆ ಹೆಚ್ಚಾಗಿದೆ. ಕೆಲ ದೇಹಳು ತುಂಡಾಗಿ ಬಿದ್ದಿವೆ. ಇನ್ನೂ ಕೆಲವರು ನುಜ್ಜುಗುಜ್ಜಾದ ಬೋಗಿಯ ಒಳಗೆ ದುರ್ಮರಣಕ್ಕೀಡಾಗಿದ್ದಾರೆ. ಇಲ್ಲಿಯವರೆಗೂ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ 233 ಶವಗಳನ್ನು ಹೊರತೆಗೆಯಲಾಗಿದೆ. 1 ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಗಂಭೀರ ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಎಲ್ಲರನ್ನೂ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೋಕಾಚರಣೆ ಘೋಷಣೆ:ಬಾಲಸೋರ್‌ನಲ್ಲಿ ರೈಲು ಹಳಿತಪ್ಪಿ ನಡೆದ ಭೀಕರ ದುರಂತದ ಹಿನ್ನೆಲೆ ಸರ್ಕಾರ ಶನಿವಾರ ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಶೋಕಾಚರಣೆ ಘೋಷಿಸಿದ್ದು, ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ. ಸಿಎಂ ಪಟ್ನಾಯಕ್ ಅವರು ಇಂದು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
ಉನ್ನತ ಮಟ್ಟದ ತನಿಖೆಗೆ ಆದೇಶ:ಕಂಡು ಕೇಳರಿಯದ ರೀತಿಯಲ್ಲಿ ಸಂಭವಿಸಿದ ದುರಂತದಿಂದ ಭಾರೀ ಟೀಕೆ ವ್ಯಕ್ತವಾಗಿದ್ದು, ಕೇಂದ್ರ ಸರ್ಕಾರ ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಘಟನೆಯ ಕುರಿತು ಮಾತನಾಡಿದರು ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್, ಅಪಘಾತವು ದುರದೃಷ್ಟಕರವಾಗಿದೆ. ರೈಲು ಬೋಗಿಗಳು ಹಳಿ ತಪ್ಪಲು ಕಾರಣವೇನೆಂದು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದರು.
ಇದೇ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಅಪಘಾತ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಭೀಕರ ಸ್ಥಳದಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲು ಖರಗ್‌ಪುರದಿಂದ ಅಧಿಕಾರಿಗಳನ್ನು ಕಳುಹಿಸಲಾಗಿದೆ.