ಚೆನ್ನೈ : ತಮಿಳುನಾಡಿನ ತಿರುಪತ್ತೂರು ಜಿಲ್ಲೆಯಲ್ಲಿ ವಿಶ್ವ ದಾಖಲೆ ನಿರ್ಮಿಸುವ ಉದ್ದೇಶದಿಂದ 15 ದಿನಗಳಲ್ಲಿ 1,500 ಕೆರೆಗಳನ್ನು ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ಯೋಜನೆಯು ತಿರುಪತ್ತೂರು ಜಿಲ್ಲಾಧಿಕಾರಿ ಎನ್. ಭಾಸ್ಕರ ಪಾಂಡಿಯನ್ ಅವರ ಉಪಕ್ರಮವಾಗಿದೆ. ಕೆರೆಗಳ ನಿರ್ಮಾಣ ಯೋಜನೆಯ ಬಗ್ಗೆ ಮಾತನಾಡಿದ ಅವರು, ಅಂತರ್ಜಲ ಮರುಪೂರಣಕ್ಕಾಗಿ ಕೆರೆಗಳನ್ನು ಅಗೆಯಲಾಗುತ್ತಿದ್ದು, ಇದರಿಂದ ಕುಡಿಯಲು ಮತ್ತು ಕೃಷಿ ಉದ್ದೇಶಗಳಿಗೆ ಅಗತ್ಯವಾದಷ್ಟು ನೀರು ಲಭಿಸಲಿದೆ ಎಂದರು.
ಜಿಲ್ಲೆಯ ಅಧಿಕಾರಿಗಳ ಪ್ರಕಾರ, 208 ಗ್ರಾಮ ಪಂಚಾಯಿತಿಗಳಿದ್ದು, ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ ಏಳು ಕೆರೆಗಳನ್ನು ನಿರ್ಮಿಸಲಾಗುವುದು. ಯೋಜನೆಗೆ ಹಣವನ್ನು ಆಯಾ ಗ್ರಾಮ ಪಂಚಾಯತ್‌ಗಳಿಂದ ಪಡೆಯಲಾಗುವುದು ಮತ್ತು ಕೆರೆಗಳ ನಿರ್ಮಾಣಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (MG NREGS) ಕಾರ್ಮಿಕರ ಸೇವೆಗಳನ್ನು ಬಳಸಲಾಗುವುದು. 30 ದಿನಗಳಲ್ಲಿ 1,127 ಕೆರೆಗಳನ್ನು ನಿರ್ಮಾಣ ಮಾಡಿದ ತಿರುವಣ್ಣಾಮಲೈ ಜಿಲ್ಲೆಯ ಸಾಧನೆಯನ್ನು ಹಿಂದಿಕ್ಕಲು ಈ ಮೂಲಕ ತಿರುಪತ್ತೂರು ಪ್ರಯತ್ನಿಸುತ್ತಿದೆ.
ತಿರುಪತ್ತೂರು ಜಿಲ್ಲಾಡಳಿತವು ಕೆರೆಗಳ ನಿರ್ಮಾಣಕ್ಕೆ ಖಾಸಗಿ ಸಹಭಾಗಿತ್ವವನ್ನು ಒಳಗೊಳ್ಳಲು ಯೋಜಿಸುತ್ತಿದೆ ಮತ್ತು ಖಾಸಗಿ ಆಸ್ತಿಯಲ್ಲಿ ಅಗೆದಿರುವ ಕೊಳಗಳಲ್ಲಿ ಮೀನು ಮರಿಗಳನ್ನು ಬೆಳೆಯಲು ಅವಕಾಶ ನೀಡಲಾಗುತ್ತದೆ. ಮೀನುಗಾರಿಕೆ ಇಲಾಖೆಯ ಸಹಯೋಗದಲ್ಲಿ ಇವುಗಳಲ್ಲಿ ಮೀನು ಮರಿಗಳನ್ನು ಬೆಳೆಸಲಾಗುವುದು. ಜಿಲ್ಲಾಡಳಿತದ ಮೂಲಗಳ ಪ್ರಕಾರ, 72 ಅಡಿ ಉದ್ದ, 36 ಅಡಿ ಅಗಲ ಮತ್ತು 6 ಅಡಿ ಆಳದ ಕೆರೆಗಳನ್ನು ಕಟ್ಟಲಾಗುವುದು. ಮಣ್ಣಿನ ಸವೆತವನ್ನು ತಡೆಗಟ್ಟಲು ಕೆರೆಗಳ ದಡದಲ್ಲಿ ಸ್ಥಳೀಯ ಮರಗಳನ್ನು ನೆಡಲಾಗುತ್ತದೆ. ಸ್ಥಳೀಯ ಪ್ರಭೇದದ ಮರಗಳಾದ ಆಲಂ, ಅರಸಂ, ವೆಂಬು, ಪುಂಗನ್ ಮತ್ತು ಮರುತು ಇವುಗಳನ್ನು ದಡಗಳಲ್ಲಿ ನೆಡಲಾಗುವುದು.