ತಿರುಪತಿ(ಆಂಧ್ರಪ್ರದೇಶ): ವಿಶ್ವದ ಶ್ರೀಮಂತ ಹಿಂದೂ ದೇವಸ್ಥಾನಗಳಲ್ಲಿ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಹೆಸರೂ ಸಹ ಸೇರಿದೆ. ಇದೀಗ ಟಿಟಿಡಿ ದೇವಸ್ಥಾನದ ಆಸ್ತಿ ವಿವರ ಬಹಿರಂಗಪಡಿಸಿದೆ. ಟಿಟಿಡಿ ಪ್ರಕಾರ, ಅವರು ದೇಶಾದ್ಯಂತ 960 ಆಸ್ತಿ ಹೊಂದಿದ್ದು, 85,705 ಕೋಟಿ ರೂಪಾಯಿ ಇದೆ ಎಂದು ಹೇಳಿದೆ. ಇದು ಸರ್ಕಾರಿ ಅಂಕಿ ಅಂಶವಾಗಿದೆ ಮತ್ತು ಆಸ್ತಿಗಳ ಮಾರುಕಟ್ಟೆ ಮೌಲ್ಯವು ಕನಿಷ್ಠ 1.5 ಪಟ್ಟು ಹೆಚ್ಚು ಅಂದರೆ ಸುಮಾರು 2 ಲಕ್ಷ ಕೋಟಿ ರೂಪಾಯಿ ಎಂದು ದೇವಸ್ಥಾನದ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಟಿಟಿಡಿ ಅಧಿಕೃತವಾಗಿ ತನ್ನ ಆಸ್ತಿಯ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಂಡಿರುವುದು ಇದೇ ಮೊದಲು. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು 2021 ರಲ್ಲಿ 11 ಬಿಲಿಯನ್ ಡಾಲರ್ಗೆ ತೆರಿಗೆಯನ್ನು ಪಾವತಿಸಿರುವುದಾಗಿ ಹೇಳಿದ್ದರು. ಅಂದರೆ ಸುಮಾರು 85,000 ಕೋಟಿಗೆ ತೆರಿಗೆ ಪಾವತಿ ಮಾಡಿದ್ದರು ಎನ್ನಲಾಗಿದ್ದು, ಇದು ಅಮೆರಿಕದ ದಾಖಲೆಯಾಗಿದೆ.
ಕಳೆದ ಐದು ತಿಂಗಳಿನಿಂದ ದೇವಸ್ಥಾನದ ಕಾಣಿಕೆ (ಹುಂಡಿ) ಮೂಲಕ ಟಿಟಿಡಿಯ ಮಾಸಿಕ ಆದಾಯವು ಸ್ಥಿರವಾಗಿ ಹೆಚ್ಚುತ್ತಿದೆ. ಈ ಸಮಯದಲ್ಲಿ ತಿರುಮಲ ತಿರುಪತಿ ದೇವಸ್ಥಾನದ ಇತ್ತೀಚಿನ ಆಸ್ತಿ ವಿವರ ಹೊರಬಿದ್ದಿದೆ. ಈ ವರ್ಷ ಏಪ್ರಿಲ್‌ನಿಂದ ಇಲ್ಲಿಯವರೆಗೆ ಹುಂಡಿ ಮೂಲಕ ಒಟ್ಟು 700 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ ಎಂದು ಮಂಡಳಿ ಹೇಳಿದೆ.
ಓದಿ:ತಿರುಮಲ ದೇವಸ್ಥಾನಕ್ಕೆ 1 ಕೋಟಿ ರೂಪಾಯಿ ದೇಣಿಗೆ ಅರ್ಪಿಸಿದ ಮುಸ್ಲಿಂ ದಂಪತಿ
ಟಿಟಿಡಿಯ ಖಜಾನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರಿಂದಾಗಿ ಇದೀಗ ಅಮೆರಿಕ ಸೇರಿದಂತೆ ಇತರ ಕೆಲವು ದೇಶಗಳು ಮತ್ತು ದೇಶದ ಕೆಲವು ಭಾಗಗಳಲ್ಲಿ ದೇವಾಲಯಗಳನ್ನು ತೆರೆಯಲು ಟಿಟಿಡಿ ಕಾರ್ಯಾರಂಭಿಸಿದೆ. ಈ ಕುರಿತು ಮಾಹಿತಿ ನೀಡಿದ ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ, ದೇಶಾದ್ಯಂತ 7,123 ಎಕರೆ ಭೂಮಿಯನ್ನು ದೇವಸ್ಥಾನದ ಟ್ರಸ್ಟ್ ನಿಯಂತ್ರಿಸುತ್ತಿದೆ. 1974 ರಿಂದ 2014 ರ ನಡುವೆ (ಈಗಿನ ವೈಎಸ್‌ಆರ್‌ಸಿಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು) ವಿವಿಧ ಸರ್ಕಾರಗಳ ಅವಧಿಯಲ್ಲಿ ಟಿಟಿಡಿಯ ವಿವಿಧ ಟ್ರಸ್ಟ್‌ಗಳು ಕೆಲವು ಅನಿವಾರ್ಯ ಕಾರಣಗಳಿಂದ 113 ಆಸ್ತಿಗಳನ್ನು ವಿಲೇವಾರಿ ಮಾಡಿವೆ ಎಂದು ಅವರು ಹೇಳಿದರು.
ಆಸ್ತಿ ಮಾರಾಟಕ್ಕೆ ಕಾರಣವೇನು ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ. 2014ರ ನಂತರ ಟಿಟಿಡಿ ಯಾವುದೇ ಆಸ್ತಿಯನ್ನು ವಿಲೇವಾರಿ ಮಾಡಿಲ್ಲ ಮತ್ತು ಭವಿಷ್ಯದಲ್ಲಿ ತನ್ನ ಯಾವುದೇ ಸ್ಥಿರ ಆಸ್ತಿಯನ್ನು ಮಾರಾಟ ಮಾಡುವ ಯೋಜನೆಯನ್ನು ಹೊಂದಿಲ್ಲ. ರಾಜ್ಯ ಸರ್ಕಾರದ ಸೂಚನೆಯಂತೆ ನನ್ನ ಅಧ್ಯಕ್ಷತೆಯಲ್ಲಿ ಹಿಂದಿನ ಟ್ರಸ್ಟ್ ಮಂಡಳಿಯು ಟಿಟಿಡಿಯ ಆಸ್ತಿಗಳ ಕುರಿತು ಪ್ರತಿ ವರ್ಷ ಶ್ವೇತಪತ್ರ ಹೊರಡಿಸಲು ತೀರ್ಮಾನಿಸಿತ್ತು ಎಂದು ಸುಬ್ಬಾ ರೆಡ್ಡಿ ಸ್ಪಷ್ಟಪಡಿಸಿದರು.
ಕಳೆದ ವರ್ಷ ಮೊದಲ ಶ್ವೇತಪತ್ರವನ್ನು ಬಿಡುಗಡೆ ಮಾಡಿಲಾಗಿತ್ತು. ಎರಡನೇ ಶ್ವೇತಪತ್ರವನ್ನು ಟಿಟಿಡಿ ವೆಬ್‌ಸೈಟ್‌ನಲ್ಲಿ ಎಲ್ಲಾ ಆಸ್ತಿಗಳ ವಿವರಗಳು ಮತ್ತು ಮೌಲ್ಯಮಾಪನದೊಂದಿಗೆ ಅಪ್‌ಲೋಡ್ ಮಾಡಲಾಗಿದೆ. ಟಿಟಿಡಿ ವಿವಿಧ ಬ್ಯಾಂಕ್‌ಗಳಲ್ಲಿ 14,000 ಕೋಟಿಗೂ ಹೆಚ್ಚು ಸ್ಥಿರ ಠೇವಣಿಗಳನ್ನು ಹೊಂದಿದೆ ಮತ್ತು ಸುಮಾರು 14 ಟನ್ ಚಿನ್ನವನ್ನು ಇದೆ. ಈಗ ಅದರ ಎಲ್ಲಾ ಭೂಮಿ ಆಸ್ತಿಗಳ ಮೌಲ್ಯಮಾಪನದೊಂದಿಗೆ ದೇವಾಲಯವು ಅನೇಕ ಪಟ್ಟು ಶ್ರೀಮಂತವಾಗಿದೆ ಎಂದು ಸುಬ್ಬಾ ರೆಡ್ಡಿ ತಿಳಿಸಿದರು.
ಓದಿ:ತಿರುಪತಿ ತಿಮ್ಮಪ್ಪ ದರ್ಶನ ಪಡೆದ 'ಧಡಕ್' ನಟಿ ಜಾಹ್ನವಿ ಕಪೂರ್: ವಿಡಿಯೋ