ತಿರುನೆಲ್ವೇಲಿ:ಹಿಂದಿನ ಕಾಲದಲ್ಲಿ ಯುವಜನರಿಗೆ ಸೀಮಿತ ಉದ್ಯೋಗಾವಕಾಶಗಳು ಇಲ್ಲ. ಖಾಸಗಿ ಕಂಪನಿಗಳಲ್ಲಿ ಭರಪೂರ ಅವಕಾಶ ಸಿಕ್ಕರೂ ಉದ್ಯೋಗ ಭದ್ರತೆ ಅವರನ್ನೂ ಕಾಡುತ್ತದೆ. ಇದೇ ಕಾರಣಕ್ಕೆ ಇಂದಿನ ಯುವ ಜನತೆ ಇದೀಗ ಸರ್ಕಾರಿ ಕೆಲಸಗಳತ್ತ ಒಲವು ತೋರುತ್ತಿದ್ದಾರೆ. ಇದಕ್ಕಾಗಿ ಹಗಲು - ರಾತ್ರಿ ಶ್ರಮವಹಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾರೆ.
ಈ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಹಿನ್ನೆಲೆ ಅನೇಕರು ಇದಕ್ಕೆಂದೇ ಇರುವ ಅಕಾಡೆಮಿಗಳನ್ನು ಸೇರುತ್ತಾರೆ. ಆರ್ಥಿಕವಾಗಿ ಸಬಲರಲ್ಲದ ಅಭ್ಯರ್ಥಿಗಳು ಸ್ವಯಂ ಅಧ್ಯಯನಕ್ಕೆ ಮುಂದಾಗುತ್ತಾರೆ. ಈ ವೇಳೆ, ಅವರಿಗೆ ಮನೆಯಲ್ಲಿ ಓದಲು ಸರಿಯಾದ ಅವಕಾಶ ಹಾಗೂ ತೊಂದರೆಗಳು ಎದುರಾಗುವ ಹಿನ್ನೆಲೆ ಅವರು, ಪಾರ್ಕ್, ಬಸ್ನಿಲ್ದಾಣ, ರಸ್ತೆಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಅಧ್ಯಯನಕ್ಕೆ ತೊಡಗುತ್ತಾರೆ. ಅದರಲ್ಲೂ ವಿಶೇಷವಾಗಿ ಮಹಿಳಾ ಅಭ್ಯರ್ಥಿಗಳು ಯಾವುದೇ ರಕ್ಷಣೆಯಿಲ್ಲದೇ ಪಾರ್ಕ್ನಲ್ಲಿ ಅಧ್ಯಯನ ನಡೆಸುವುದು ಕಂಡು ಬರುತ್ತದೆ.
ಅಭ್ಯರ್ಥಿಗಳಿಗೆ ನೆರವು: ಇಂತಹ ಘಟನೆ ತಿರುನೆಲ್ವೇಲಿಯ ಜಿಲ್ಲಾಧಿಕಾರಿ ವಿಷ್ಣುಗೆ ಕಂಡು ಬಂದಿದೆ. ಅವರು ಕಾರಿನಲ್ಲಿ ಹೋಗುವಾಗ, ಸರಿಯಾದ ಸೌಲಭ್ಯಗಳು ಇಲ್ಲದೇ ಅಭ್ಯರ್ಥಿಗಳು ಅಧ್ಯಯನದಲ್ಲಿ ತೊಡಗಿದ್ದನ್ನು ಕಂಡು, ಅವರಿಗಾಗಿ ಏನನ್ನಾದರೂ ಮಾಡಬೇಕು ಎಂದು ನಿರ್ಧರಿಸಿದ್ದಾರೆ. ಇದಕ್ಕಾಗಿ ಅವರು ಪಲಯಂಕೊಟ್ಟಯಿ ಬಸ್ ನಿಲ್ದಾಣದಲ್ಲಿ ಎರಡು ಅಂಗಡಿಗಳನ್ನು ಪಡೆದು ಅವುಗಳನ್ನು ಕಲಿಕಾ ಕೇಂದ್ರವಾಗಿ ಮಾರ್ಪಡಿಸಿದ್ದಾರೆ.