ತಿರುಮಲ(ಆಂಧ್ರಪ್ರದೇಶ): ತಿರುಪತಿ ದೇವಸ್ಥಾನವು ಪ್ರಪಂಚದಲ್ಲೇ ಅತ್ಯಂತ ಪ್ರಸಿದ್ಧ ಮತ್ತು ಶ್ರೀಮಂತ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ನಿತ್ಯ ಕೋಟ್ಯಂತರ ರೂಪಾಯಿ ಕಾಣಿಕೆ ರೂಪದಲ್ಲಿ ಹರಿದು ಬರುತ್ತದೆ. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಕಳೆದ ಎರಡು ವರ್ಷಗಳಲ್ಲಿ ಸುಮಾರು 1,500 ಕೋಟಿ ರೂಪಾಯಿ ದೇಣಿಗೆ ರೂಪದಲ್ಲಿ ಹರಿದು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಕೋವಿಡ್ ಪರಿಸ್ಥಿತಿಯ ಕಾರಣ ದೇವಸ್ಥಾನ ಹುಂಡಿ ಹಾಗೂ ಬ್ಯಾಂಕ್ ಠೇವಣಿಗಳಲ್ಲಿ ಇಟ್ಟಿದ್ದ ಹಣ ಬಳಕೆ ಮಾಡಿಕೊಂಡಿತ್ತು. ಆದರೆ, ಬರುವ ದಿನಗಳಲ್ಲಿ ಇಂತಹ ಸಮಸ್ಯೆ ಎದುರಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದರ ಭಾಗವಾಗಿ ವಿವಿಧ ಟ್ರಸ್ಟ್ಗಳ ಮೂಲಕ ದೇಣಿಗೆ ಸಂಗ್ರಹ ಮಾಡಲಾಗ್ತಿದೆ. ಸದ್ಯ ಹೊಸದಾಗಿ 13 ಅತಿಥಿ ಗೃಹ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
ಇದಕ್ಕಾಗಿ ಹೆಚ್ಚಿನ ಹಣ ಪಾವತಿ ಮಾಡಲು ಮುಂದೆ ಬರುವವರಿಗೆ ಒಂದಷ್ಟು ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಹೀಗಾಗಿ, 90 ಕೋಟಿ ರೂಪಾಯಿ ದೇಣಿಗೆ ಹರಿದು ಬಂದಿದೆ. ದಾನಿಯೋರ್ವ ಬರೋಬ್ಬರಿ 12 ಕೋಟಿ ರೂಪಾಯಿ ನೀಡಿದ್ದಾರೆ.
ತಿರುಮಲ ದೇವಸ್ಥಾನ ಮಂಡಳಿ ನವಿ ಮುಂಬೈನಲ್ಲಿ ಹೊಸ ದೇವಾಲಯ ನಿರ್ಮಾಣ ಮಾಡ್ತಿದೆ. ಅದಕ್ಕೆ ಅಗತ್ಯವಿರುವ 10 ಎಕರೆ ಭೂಮಿ ಮಹಾರಾಷ್ಟ್ರ ಸರ್ಕಾರ ಉಚಿತವಾಗಿ ನೀಡಿದೆ. ಇದೀಗ ದೇವಸ್ಥಾನ ನಿರ್ಮಾಣಕ್ಕಾಗಿ ರೇಮಂಡ್ ಕಂಪನಿಯ ಎಂಡಿ ಗೌತಮ್ 60 ಕೋಟಿ ರೂಪಾಯಿ ನೀಡಲು ಮುಂದೆ ಬಂದಿದ್ದಾರೆ.
ದೇವಸ್ಥಾನದ ಗಾಳಿಗೋಪುರದ ಶಿಟ್ ಅಳವಡಿಕೆ ಮಾಡಲು ರಿಲಯನ್ಸ್ 25 ಕೋಟಿ ರೂ. ದೇಣಿಗೆ ನೀಡಿದೆ. ಹುಂಡಿಯಲ್ಲಿ ದೇಣಿಗೆ ರೂಪದಲ್ಲಿ ಹರಿದು ಬರುವ ಹಣ ಎಣಿಕೆ ಕಾರ್ಯ ಪರಕಾಮಣಿ ಮಂಟಪದಲ್ಲಿ ನಡೆಯುತ್ತಿದ್ದು, ಅದು ತುಂಬಾ ಚಿಕ್ಕದಾಗಿದೆ. ಇದೀಗ ಹೊಸ ಪರಕಾಮಣಿ ಕಟ್ಟಡ ನಿರ್ಮಾಣಕ್ಕಾಗಿ ಬೆಂಗಳೂರಿನ ಮುರಳಿಕೃಷ್ಣ ಎಂಬ ದಾನಿ 23 ಕೋಟಿ ರೂ. ನೀಡಿದ್ದಾರೆ.
ಇದನ್ನೂ ಓದಿರಿ:ತಿರುಪತಿ ವೆಂಕಟೇಶ್ವರ ಸ್ವಾಮಿಗೆ 3 ಕೋಟಿ ಮೌಲ್ಯದ ಕಠಿ, ವರದ ಹಸ್ತ ಕೊಡುಗೆ ನೀಡಿದ ಅಪರಿಚಿತ ದಾನಿ
ದೇವಸ್ಥಾನದ ಬರ್ಡ್ ಆಸ್ಪತ್ರೆಯನ್ನ ಸಂಪೂರ್ಣವಾಗಿ ಆಧುನೀಕರಣಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದಕ್ಕಾಗಿ ಸಿಟಿ ಸ್ಕ್ಯಾನ್ ಯಂತ್ರ ದೆಹಲಿಯ ರಾಜೇಶ್ ಹಾಗೂ ಆಧುನಿಕ ಎಕ್ಸ್ರೇ ಉಪಕರಣ ಆರ್ಎಸ್ ಬ್ರದರ್ಸ್ ನೀಡ್ತಿದ್ದಾರೆ. ರವಿ ಎಂಬ ದಾನಿ 8 ಕೋಟಿ ರೂಪಾಯಿ ದಾನವಾಗಿ ನೀಡಿದ್ದಾರೆ. ಇದರ ಜೊತೆಗೆ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು 10 ರೂಪಾಯಿಯಿಂದ 3 ಲಕ್ಷರೂಪಾಯಿವರೆಗೆ ದಾನ ರೂಪದಲ್ಲಿ ನೀಡುತ್ತಿದ್ದಾರೆ.