ತಿರುಪತಿ: ತಿರುಪತಿ ತಿರುಮಲ ದೇವಸ್ಥಾನದಲ್ಲಿ ಫೇಶಿಯಲ್ ರಿಕಗ್ನಿಶನ್ ತಂತ್ರಜ್ಞಾನ (ಮುಖ ಗುರುತಿಸುವ ತಂತ್ರಜ್ಞಾನ) ವನ್ನು ಬುಧವಾರದಿಂದ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ತಿಮ್ಮಪ್ಪನ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಇನ್ನು ಮುಂದೆ ಈ ಫೇಶಿಯಲ್ ರಿಕಗ್ನಿಶನ್ ಕ್ಯಾಮೆರಾಗಳ ಮೂಲಕ ಸುರಕ್ಷತಾ ತಪಾಸಣೆಗೆ ಒಳಗಾಗಲಿದ್ದಾರೆ. ಈ ತಂತ್ರಜ್ಞಾನವನ್ನು ಸದ್ಯ ವೈಕುಂಟಂ 2 ಮತ್ತು ವಸತಿ ನಿರ್ವಹಣಾ ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ. ಟೋಕನ್ ರಹಿತ ದರ್ಶನದಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಮತ್ತು ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಇನ್ನಷ್ಟು ಸರಳವಾಗಿ ಕೊಠಡಿಗಳನ್ನು ಹಂಚುವ ಉದ್ದೇಶದಿಂದ ಫೇಶಿಯಲ್ ರಿಕಗ್ನಿಶನ್ ಪರಿಚಯಿಸಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ.
ಸರ್ವ ದರ್ಶನ (ಉಚಿತ ದರ್ಶನ) ಸಂಕೀರ್ಣದಲ್ಲಿ ಮತ್ತು ಮುಂಗಡ ಠೇವಣಿ ಮರುಪಾವತಿ ಕೌಂಟರ್‌ಗಳಲ್ಲಿ ಒಬ್ಬನೇ ವ್ಯಕ್ತಿಯು ಹೆಚ್ಚಿನ ಟೋಕನ್‌ಗಳನ್ನು ಸಂಗ್ರಹಿಸುವುದನ್ನು ತಡೆಯಲು ಈ ಹೊಸ ತಂತ್ರಜ್ಞಾನ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಈ ತಂತ್ರಜ್ಞಾನದ ಬಳಕೆಯು ಪದೇ ಪದೆ ಬರುವ ಜನರಿಗೆ ದರ್ಶನವನ್ನು ನಿರಾಕರಿಸಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಬ್ಬರೇ ವ್ಯಕ್ತಿ ಪದೇ ಪದೆ ದರ್ಶನ ಪಡೆಯಲು ಹೋದರೆ ಇತರ ಭಕ್ತರು ದರ್ಶನಕ್ಕಾಗಿ ಬಹಳ ಸಮಯ ಕಾಯಬೇಕಾಗುತ್ತದೆ. ಹೀಗಾಗಿ ಒಬ್ಬ ಭಕ್ತನಿಗೆ ತಿಂಗಳಿಗೆ ಒಂದಕ್ಕಿಂತ ಹೆಚ್ಚು ಬಾರಿ ಉಚಿತ ದರ್ಶನಕ್ಕೆ ಅವಕಾಶವಿರುವುದಿಲ್ಲ.
ಸಬ್ಸಿಡಿ ದರದ ಬಾಡಿಗೆಯಲ್ಲಿ ನಿಜವಾಗಿಯೂ ಅಗತ್ಯವಿರುವ ಭಕ್ತರಿಗೆ ಕೊಠಡಿಗಳನ್ನು ನೀಡಲು ಫೇಶಿಯಲ್ ರೆಕಗ್ನಿಷನ್ ಟೆಕ್ನಾಲಜಿ (ಎಫ್‌ಆರ್‌ಟಿ) ಟಿಟಿಡಿಗೆ ಸಹಾಯಕಾರಿಯಾಗಲಿದೆ. ಸಬ್ಸಿಡಿ ಬಾಡಿಗೆಯಲ್ಲಿ ಕೊಠಡಿಗಳನ್ನು ಕಾಯ್ದಿರಿಸುವ ಮತ್ತು ನಂತರ ಹೆಚ್ಚಿನ ಬೆಲೆಗೆ ಅದೇ ಕೊಠಡಿಗಳನ್ನು ಬೇರೆಯವರಿಗೆ ನೀಡುವ ಮಧ್ಯವರ್ತಿಗಳ ಪಾತ್ರವನ್ನು ನಿಗ್ರಹಿಸಲು ಹೊಸ ತಂತ್ರಜ್ಞಾನ ಸಹಾಯ ಮಾಡಲಿದೆ. ಎಫ್‌ಆರ್‌ಟಿ ಇದು ಯಾವುದೇ ಒಂದು ಮುಖವನ್ನು ಲಿಂಗ, ವಯಸ್ಸು, ಭಾವನೆಗಳು ಮತ್ತು ವೈಶಿಷ್ಟ್ಯಗಳ ಆಧಾರದ ಮೇಲೆ ಗುರುತಿಸುವ ಸಾಫ್ಟ್‌ವೇರ್ ಆಧರಿಸಿ ಕೆಲಸ ಮಾಡುತ್ತದೆ. ಇದು ಎರಡು ಮುಖಗಳ ನಡುವಿನ ಹೋಲಿಕೆಯನ್ನು ಮೌಲ್ಯಮಾಪನ ಮಾಡುತ್ತದೆ.