ಕಠ್ಮಂಡು (ನೇಪಾಳ): ತೊಂದರೆಗೆ ಸಿಲುಕಿದ್ದ ನೇಪಾಳದ ಪ್ರಧಾನಿ ಕೆ.ಪಿ. ಓಲಿ ಪಾಲಿಗೆ ಸಮಯ ಮತ್ತೊಮ್ಮೆ ಒಲವು ತೋರುತ್ತಿದೆ. ಓಲಿ ನೇತೃತ್ವದ ಸಿಪಿಎನ್ ಹಾಗೂ ಪ್ರಚಂಡ ನೇತೃತ್ವದ ಮಾವೋವಾದಿ-ಕೇಂದ್ರಿತ ಪಕ್ಷಗಳನ್ನು 2018ರ ಚುನಾವಣೆಗೆ ಮುಂಚೆ ಒಗ್ಗಟ್ಟಾಗಿಸಿದ್ದ ಎನ್‌ಸಿಪಿಯ (ನೇಪಾಳ ಕಮ್ಯುನಿಸ್ಟ್ ಪಕ್ಷ) ಮೈತ್ರಿಕೂಟವನ್ನು ಸುಪ್ರೀಂ ಕೋರ್ಟ್ ಭಾನುವಾರ ರದ್ದುಗೊಳಿಸಿದೆ. ಇದರಿಂದಾಗಿ ಓಲಿ ಅವರು ಎದುರಿಸುತ್ತಿದ್ದ ಕಷ್ಟ ಈಗ ಕಡಿಮೆಯಾದಂತಿದೆ. ಅವರೀಗ ನೆಮ್ಮದಿ ಅನುಭವಿಸುತ್ತಿದ್ದಂತೆ ಕಾಣುತ್ತಿದೆ. ಕಾರಣ? ಅವರು ಯುಎಂಎಲ್‌ನ ‘ಕಾನೂನುಬದ್ಧ ಬಣ’ವನ್ನು ಮುನ್ನಡೆಸಿದ ಭಾವನೆ ಹೊಂದಿದ್ದಾರೆ. ಇನ್ನೊಂದೆಡೆ ಮಾಧವ ನೇಪಾಳ ಅವರು ಯುಎಂಎಲ್‌ನ ಅಸಂತುಷ್ಟ ಬಣದ ನೇತೃತ್ವಕ್ಕೆ ಮತ್ತೆ ಹಿಂದಿರುಗಿದ್ದಾರೆ.
ನೇಪಾಳದ ಆಡಳಿತ ಪಕ್ಷ ಈಗಲೂ ಮುರುಟಿಹೋದಂತಿದ್ದು, ಚಿಂದಿಚಿಂದಿಯಾಗಿಯೇ ಇದೆ. ಓಲಿ ಅವರ ಹೊಸ ವಿರೋಧಿ ಬಣವನ್ನು ಮುರಿದಿರುವ ಪ್ರಚಂಡ ಅವರು ತಮ್ಮ ಹಳೆಯ ಪಕ್ಷ - ಮಾವೋವಾದಿ ಕೇಂದ್ರಕ್ಕೆ ಮರಳಿದ್ದಾರೆ. ಯುಎಂಎಲ್ ಮತ್ತು ಮಾವೋವಾದಿ-ಕೇಂದ್ರವನ್ನು ಸುಪ್ರೀಂ ಕೋರ್ಟ್ ಪುನರುತ್ಥಾನಗೊಳಿಸಿದ ನಂತರ ಮಾಧವ ನೇಪಾಳ ಅವರು ಮಂಗಳವಾರ ತಮ್ಮ ಹೊಸ ಮಿತ್ರ ಪ್ರಚಂಡ ಅವರಿಗೆ ವಿದಾಯ ಹೇಳಿದ್ದಾರೆ. 2017ರ ಪೀಳಿಗೆಯ ಚುನಾವಣೆಗೂ ಸ್ವಲ್ಪ ಮುಂಚೆ ಎನ್‌ಸಿಪಿ ಏಕೀಕರಣದ ಆಲೋಚನೆಯೊಂದಿಗೆ ಬಂದವರು ಓಲಿ.
ಪಕ್ಷವು ಅತಿದೊಡ್ಡದಾಗಿ ಮತ್ತು ಪ್ರಬಲವಾಗಿ ಹೊರಹೊಮ್ಮುವ ಮೂಲಕ ಈ ಕ್ರಮ ಪವಾಡವನ್ನೇ ಸೃಷ್ಟಿಸಿಬಿಟ್ಟಿದೆ. ಅತ್ತ ದೆಹಲಿ ಈ ಬೆಳವಣಿಗೆಗಳನ್ನು ತಳಮಳದಿಂದ ನೋಡುತ್ತಿದ್ದಂತೆಯೇ, ಕಮ್ಯುನಿಸ್ಟ್ ಪಕ್ಷವು ಹಿಮಾಲಯದ ದಕ್ಷಿಣದಲ್ಲಿ ಅಂತಿಮವಾಗಿ ಒಗ್ಗಟ್ಟಾಗುತ್ತಿರುವ ದಿನದ ಹೊಂಗಿರಣವನ್ನು ನೋಡಿ ಚೀನಾ ಸಮಾಧಾನ ತಂದುಕೊಂಡಿದೆ.
ಓಲಿ ಅವರು ಸುಮಾರು ಮೂರು ತಿಂಗಳ ಹಿಂದೆ ಜನಪ್ರತಿನಿಧಿಗಳ ಸಭೆಯನ್ನು ವಿಸರ್ಜಿಸಿದ ನಂತರ ಹೊಸ ಓಲಿ ವಿರೋಧಿ ಸಿಪಿಎನ್ ಸಮೀಕರಣವು ಇತ್ತೀಚೆಗೆ ಬಲಗೊಂಡಿತ್ತು. ಅನೇಕರಿಗೆ ಹಠಾತ್ ಮತ್ತು ಅನಿರೀಕ್ಷಿತ ಅನಿಸಿರುವ ಈ ಬೆಳವಣಿಗೆಯು ಪ್ರಚಂಡ ಮತ್ತು ನೇಪಾಳ ಸೇರಿದಂತೆ ಅವರದೇ ಪಕ್ಷದ ಒಡನಾಡಿಗಳನ್ನು ಕೆರಳಿಸಿದೆ. ಆದರೆ, ವಿಸರ್ಜಿಸಲ್ಪಟ್ಟಿದ್ದ ಸಂಸತ್ತನ್ನು ನೇಪಾಳದ ಸುಪ್ರೀಂ ಕೋರ್ಟ್ ಫೆಬ್ರವರಿ 23ರಂದು ಪುನಃ ಸ್ಥಾಪಿಸಿದಾಗ, ಸಣ್ಣ ಪ್ರಮಾಣದ ತೊಂದರೆ ಕಾಣಿಸಿಕೊಂಡಾಗಲೂ ಓಲಿ ರೀತಿ ಸದನವನ್ನು ವಿಸರ್ಜಿಸಲು ಉತ್ತೇಜಿತರಾಗಬಹುದಾದ ಭವಿಷ್ಯದ ಪ್ರಧಾನ ಮಂತ್ರಿಗಳಿಗೆ ಎಚ್ಚರಿಕೆ ನೀಡುವಂತೆ, ಹೊಸ ಪೂರ್ವನಿದರ್ಶನವೊಂದನ್ನು ರೂಪಿಸಿದೆ.
ಈ ವಾರ ಸಂಗತಿಗಳು ಮತ್ತೆ ಬದಲಾಗಿವೆ. ಸುಪ್ರೀಂ ಕೋರ್ಟ್‌ನ ಭಾನುವಾರದ ಆದೇಶವು ಎನ್‌ಸಿಪಿ ಏಕತೆಯನ್ನು ತಿರಸ್ಕರಿಸುವ ಮೂಲಕ ನೇಪಾಳದ ರಾಜಕೀಯವನ್ನು ಯುಎಂಎಲ್ ಮತ್ತು ಮಾವೋವಾದಿ-ಕೇಂದ್ರ ಎಂಬ ಎರಡು ವಿಭಿನ್ನ ರಾಜಕೀಯ ಶಕ್ತಿಗಳಷ್ಟೇ ಇದ್ದ 2017ರ ಚುನಾವಣಾ ದಿನಗಳಿಗೆ ಹಿಂತಿರುಗಿಸಿದೆ. ನ್ಯಾಯಾಲಯದ ತೀರ್ಪಿನ ಪ್ರಕಾರ ಓಲಿ, ನೇಪಾಳ, ಪ್ರಚಂಡ ಮತ್ತು ಇತರರು ಸೇರಿದಂತೆ ಎಲ್ಲರೂ ಇತ್ತೀಚಿನ ತೊಂದರೆಗಳನ್ನು ಮರೆತು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಓಲಿ ಅವರ ವಿರುದ್ಧ ಅವಿಶ್ವಾಸ ನಿರ್ಣಯದ ಕತ್ತಿ ನೇತಾಡುತ್ತಿರುವ ಈ ಸಂದರ್ಭದಲ್ಲಿ, ಈ ಆದೇಶದ ಪ್ರಕಾರ, ತಮ್ಮ ಸಂಸತ್ತಿನ ಸ್ಥಾನಗಳು ಮತ್ತು ಸಂಖ್ಯೆಗಳನ್ನು ರಕ್ಷಿಸಲು ಕಮ್ಯುನಿಸ್ಟರು ತಮ್ಮ ಹಳೆಯ ಪಕ್ಷಗಳಿಗೆ ಅಂಟಿಕೊಳ್ಳಬೇಕಿದೆ.
ಸುಪ್ರೀಂ ಕೋರ್ಟ್‌ನ ಈ ಆದೇಶವು ಎನ್‌ಸಿಪಿಯನ್ನು ಇತಿಹಾಸದ ಮಿತಿಗೆ ಎಸೆದಿದೆ. ನೇಪಾಳ ಸಂಸತ್ತಿನ ಕೆಳಮನೆ, ಜನಪ್ರತಿನಿಧಿಗಳ ಸಭೆಯಲ್ಲಿ 121 ಸ್ಥಾನಗಳನ್ನು ಹೊಂದಿರುವ ಯುಎಂಎಲ್ ಈಗ ದೊಡ್ಡ ಪಕ್ಷವಾಗಿದ್ದು 63 ಸ್ಥಾನಗಳೊಂದಿಗೆ ನೇಪಾಳಿ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿ ಹಾಗೂ 53 ಸ್ಥಾನಗಳೊಂದಿಗೆ ಮಾವೋವಾದಿ ಕೇಂದ್ರವು ಮೂರನೇ ಸ್ಥಾನದಲ್ಲಿದೆ. ಬಾಬುರಾಮ್ ಭಟ್ಟಾರೈ ನೇತೃತ್ವದ ಜನತಾ ಸಮಾಜವಾದಿ ಪಕ್ಷ (ಜೆಎಸ್‌ಪಿ) 34 ಸ್ಥಾನಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ 275 ಸದಸ್ಯರ ಸದನದಲ್ಲಿ ಇತರ ಮೂರು ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಯೊಬ್ಬ ತಲಾ ಒಂದು ಸ್ಥಾನವನ್ನು ಹೊಂದಿದ್ದಾರೆ.
ಅವಿಶ್ವಾಸ ಮತ ಯಾಚನೆಯ ಕತ್ತಿ ನೇತಾಡುತ್ತಿರುವಂತೆ ಓಲಿ, ನೇಪಾಳ ಮತ್ತು ಪ್ರಚಂಡ ಅವರು ತಮ್ಮ ಅಂತರ್ಗತ ಶಕ್ತಿಯನ್ನು ಬಲಪಡಿಸಲು ಮತ್ತು ಸೂಕ್ತ ಸಮ್ಮಿಶ್ರ ಪಾಲುದಾರರನ್ನು ಹುಡುಕುವ ತಮ್ಮ ಕಸರತ್ತನ್ನು ತೀವ್ರಗೊಳಿಸಿದ್ದಾರೆ. ನೇಪಾಳಿ ರಾಜಕೀಯದಲ್ಲಿ ಈಗ ಬೆಳವಣಿಗೆಗಳು ವೇಗವಾಗಿ ನಡೆಯುತ್ತಿವೆಯಾದರೂ ಅಂತಿಮವಾಗಿ ಯಾರು ವಿಜೇತರಾಗಿ ಹೊರಹೊಮ್ಮುತ್ತಾರೆ ಎಂಬುದನ್ನು ಮಾತ್ರ ಹೇಳುವುದು ಇನ್ನೂ ಯಾರಿಗೂ ಸಾಧ್ಯವಿಲ್ಲದಂತಿದೆ.
ದೊಡ್ಡ ಪ್ರಶ್ನೆ ಏನೆಂದರೆ ಓಲಿಯ ಕಠಿಣ ಸಮಯ ಈಗ ಮುಗಿದುಹೋಯಿತೆ? ತನ್ನದೇ ಒಡನಾಡಿಗಳಿಂದ ಅವಿಶ್ವಾಸ ನಿರ್ಣಯವನ್ನು ಎದುರಿಸಲು ಸಜ್ಜಾಗಿರುವ ಅವರ ಸರ್ಕಾರ ಈಗ ಸುರಕ್ಷಿತವಾಗಿದೆಯೇ? ಒಂದು ವಿಷಯ ಮಾತ್ರ ಸ್ಪಷ್ಟ - ತಮ್ಮ ರಾಜೀನಾಮೆಗೆ ಒತ್ತಾಯಿಸಿದ್ದ ಪ್ರಚಂಡ ಮತ್ತು ಮಾಧವ ನೇಪಾಳ ಸೇರಿದಂತೆ ತಮ್ಮ ಮಾಜಿ ಒಡನಾಡಿಗಳ ತೀವ್ರ ಪ್ರತಿಭಟನೆಯನ್ನು ಹತ್ತಿಕ್ಕಲು ಅವರ ಆಡಳಿತ ಹೆಣಗಾಡುತ್ತಿರುವಾಗಲೇ, ಇತ್ತೀಚಿನ ವಾರಗಳಲ್ಲಿ ಓಲಿ ಅವರು ಹಿಂದಿಗಿಂತ ಹೆಚ್ಚು ಆತ್ಮವಿಶ್ವಾಸ ಹೊಂದಿದಂತಿದ್ದು ಈಗ ಇನ್ನಷ್ಟು ಶಕ್ತಿಶಾಲಿಯಾದಂತೆ ತೋರುತ್ತಿದೆ.