ಹೈದರಾಬಾದ್ :ಕಳೆದ ಏಳು ವಾರಗಳಿಂದ ನಿರಂತರವಾಗಿ ಏರುತ್ತಿರುವ ಕೋವಿಡ್ ಹಾಗೂ ಅದರಿಂದಾಗಿ ಕಳೆದ ನಾಲ್ಕು ವಾರಗಳಿಂದ ಹೆಚ್ಚುತ್ತಿರುವ ಸಾವು-ನೋವುಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆಯ ಗಂಟೆ ಮೊಳಗಿಸಿದೆ.
ಮಹಾರಾಷ್ಟ್ರ, ಛತ್ತೀಸ್‍ಗಢ, ಕರ್ನಾಟಕ, ಉತ್ತರ ಪ್ರದೇಶ, ಕೇರಳ ಮತ್ತು ಇತರ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಏರುಗತಿಯಲ್ಲಿವೆ. ನಿಖರವಾಗಿ ಹೇಳುವುದಾದರೆ, 2021ರ ಮಾರ್ಚ್ 1 ರಂದು ದೇಶದಲ್ಲಿ 15,500 ಪ್ರಕರಣಗಳು ದಾಖಲಾಗಿದ್ದರೆ, ಇಂದು ಪ್ರಕರಣಗಳ ಸಂಖ್ಯೆ 12 ಪಟ್ಟು ಹೆಚ್ಚಾಗಿದೆ. ಒಂದೇ ಶವಸಂಸ್ಕಾರದ ಚಿತೆಯ ಮೇಲೆ ಎಂಟು ಶವಗಳನ್ನು ಇಟ್ಟು ಅಂತ್ಯಸಂಸ್ಕಾರ ಮಾಡುವ ದೃಶ್ಯಗಳಿಗೆ ಮಹಾರಾಷ್ಟ್ರ ಮತ್ತು ರಾಯಪುರ ಸಾಕ್ಷಿಯಾಗಿವೆ.
ಛತ್ತೀಸ್‍ಗಢದ ಸರ್ಕಾರಿ ಆಸ್ಪತ್ರೆಗಳಲ್ಲಿ ಮೃತ ದೇಹಗಳು ರಾಶಿಯಾಗುತ್ತಿವೆ. ಕೋವಿಡ್ ಅನ್ನು ನಿರ್ಲಕ್ಷಿಸಿದ್ದಕ್ಕಾಗಿ ನಾವು ತೆರಬೇಕಾದ ಬೆಲೆಯನ್ನು ಈ ಪರಿಸ್ಥಿತಿ ನಮಗೆ ಅನಾವರಣ ಮಾಡುತ್ತಿದೆ. ಕಳೆದ ವರ್ಷ ನೋಡಿದ್ದಕ್ಕಿಂತ ಈ ವರ್ಷ ಕೋವಿಡ್ ಸಾಂಕ್ರಾಮಿಕವು ಗರಿಷ್ಠ ಹಂತವನ್ನು ದಾಟಲಿದೆ ಎಂದು ಕೇಂದ್ರ ಹೇಳುತ್ತಿದೆ. ಕೊರೊನಾ ಮಾರ್ಗಸೂಚಿಗಳ ನಿರ್ಲಕ್ಷ್ಯ, ಸ್ಥಳೀಯ ಚುನಾವಣೆಗಳು, ಮದುವೆಗಳಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಸೇರುವುದು ಮತ್ತು ಇತರ ಸಮಾರಂಭಗಳು ಪ್ರಸ್ತುತ ಏರಿಕೆಗೆ ಕಾರಣವಾಗಿವೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಆದಾಗ್ಯೂ, ಕಳೆದ ವರ್ಷದ ವಿಧಾನಸಭಾ ಚುನಾವಣೆಗಳಲ್ಲಿ ಅನುಸರಿಸಿದ್ದ ಕೋವಿಡ್ ಮಾರ್ಗಸೂಚಿಗೆ ಏನಾಯಿತು ಎಂಬುದು ಪ್ರಶ್ನೆ ಹಾಗೇ ಉಳಿದಿದೆ. ದೇವರ ಮೇಲಿನ ಭಕ್ತಿ ಕೊರೊನಾವನ್ನು ದೂರ ಮಾಡುತ್ತದೆ ಎಂಬ ನೆಪವೊಡ್ಡಿ ಕುಂಭಮೇಳ ಪ್ರಾರಂಭವಾಯಿತು. ಕುಂಭಮೇಳದಲ್ಲಿ ಇರುವಂತಹ ಬೃಹತ್ ಜನಜಂಗುಳಿಯು ಕೋವಿಡ್ ಸಕ್ರಿಯತೆಯನ್ನು ಹೆಚ್ಚಿಸುವಂಥದು. ಲಸಿಕೆ ದೇಶದ ಪ್ರತಿಯೊಬ್ಬರಿಗೂ ತಲುಪುವ ಮೊದಲೇ, ಲಸಿಕೆ ಈಗಾಗಲೇ ಬಂದಿದೆಯಲ್ಲ ಎಂಬ ಸಂತೃಪ್ತಿಯಿಂದ ಸರ್ಕಾರಗಳು ಕೊರೊನಾ ನಿಯಂತ್ರಣ ಕ್ರಮಗಳ ಕುರಿತು ನಿರ್ಲಕ್ಷ್ಯದ ಮನೋಭಾವವನ್ನು ಬೆಳೆಸಿಕೊಂಡವು.
ಈ ನಿರ್ಲಕ್ಷ್ಯ ವರ್ತನೆಯೇ ಕೋವಿಡ್ ಹರಡುವಿಕೆಯನ್ನು ಬಲಪಡಿಸಲು ಕಾರಣವಾಯಿತು. ನಾಗರಿಕರ ನಿರ್ಲಕ್ಷ್ಯದ ಜೊತೆಗೆ, ವೈರಸ್ನ ರೂಪಾಂತರಗಳು ಸಹ ಪರಿಸ್ಥಿತಿ ಹದಗೆಡಲು ಕಾರಣವಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ಆದ ಹಾಗೆ ಹಾಸಿಗೆಗಳು, ಔಷಧಿಗಳು ಮತ್ತು ಆಮ್ಲಜನಕದ ಕೊರತೆಯು ಇಡೀ ದೇಶವನ್ನು ವೇಗವಾಗಿ ಆವರಿಸುತ್ತಿದೆ. ಸ್ಪುಟ್ನಿಕ್ ವಿ ಮತ್ತು ಇತರ ವಿದೇಶಿ ಲಸಿಕೆಗಳ ತುರ್ತು ಬಳಕೆಯನ್ನು ಕೇಂದ್ರವು ಅನುಮೋದಿಸಿದೆ. ಆರೋಗ್ಯ ಸೇವೆಗಳ ಕ್ಷೇತ್ರದ ಕುಸಿತವನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವಾಗ ಔಷಧ ಉದ್ಯಮದೊಂದಿಗೆ ಸಮನ್ವಯ ಸಾಧಿಸುವ ಮೂಲಕ ಸರ್ಕಾರವು ಕೋವಿಡ್ ವಿರುದ್ಧ ಬಹು ಆಯಾಮದ ಹೋರಾಟವನ್ನು ಪ್ರಾರಂಭಿಸಲು ಇದು ಸಕಾಲ.