ಗಾಜಿಯಾಬಾದ್: ಹೊಸ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲದ ಭಾಗವಾಗಿ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಅವರು ಹರಿಯಾಣ, ಮಹಾರಾಷ್ಟ್ರ ಮತ್ತು ರಾಜಸ್ಥಾನದಾದ್ಯಂತ ಆಯೋಜಿಸಿರುವ ಏಳು ರೈತರ ಸಭೆಗಳಲ್ಲಿ ಫೆ.14 ರಿಂದ ಭಾಗವಹಿಸಲಿದ್ದಾರೆ.
ಫೆಬ್ರವರಿ 23 ರಂದು ಮುಕ್ತಾಯಗೊಳ್ಳಲಿರುವ ಈ ರೈತರ ಸಭೆಗಳು ಸಂಯುಕ್ತ ಕಿಸಾನ್ ಮೋರ್ಚಾದ ಔಟ್ರೀಚ್ ಕಾರ್ಯಕ್ರಮದ ಭಾಗವಾಗಿವೆ ಎಂದು ಬಿಕೆಯು ಮಾಧ್ಯಮ ಉಸ್ತುವಾರಿ ಧರ್ಮೇಂದ್ರ ಮಲಿಕ್ ಮಾಹಿತಿ ನೀಡಿದ್ದಾರೆ. ಈ ಕಿಸಾನ್ ಮಹಾಪಂಚಾಯತ್ ಹರಿಯಾಣದ ಕರ್ನಾಲ್, ರೋಹ್ಟಕ್, ಸಿರ್ಸಾ ಮತ್ತು ಹಿಸಾರ್ ಜಿಲ್ಲೆಗಳಲ್ಲಿ ಮತ್ತು ಮಹಾರಾಷ್ಟ್ರದ ಅಕೋಲಾ ಮತ್ತು ರಾಜಸ್ಥಾನದ ಸಿಕಾರ್ನಲ್ಲಿ ನಡೆಯಲಿವೆ ಎಂದು ತಿಳಿಸಿದರು.
ಸೆಪ್ಟೆಂಬರ್‌ನಲ್ಲಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳನ್ನು ಕೇಂದ್ರ ರದ್ದುಪಡಿಸಬೇಕು ಮತ್ತು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಹೊಸ ಕಾನೂನು ರೂಪಿಸಬೇಕು ಎಂಬ ಬೇಡಿಕೆಯೊಂದಿಗೆ ನವೆಂಬರ್‌ನಿಂದ ದೆಹಲಿಯ ಗಡಿ ಭಾಗಗಳಾದ ಸಿಂಗು, ಟಿಕ್ರಿ ಮತ್ತು ಗಾಜಿಪುರಗಳಲ್ಲಿ ಸಾವಿರಾರು ರೈತರು ಬೀಡುಬಿಟ್ಟಿದ್ದಾರೆ.
ಪ್ರತಿಭಟನಾ ನಿರತ ರೈತ ಸಂಘಗಳೊಂದಿಗೆ 11 ಸುತ್ತಿನ ಮಾತುಕತೆ ನಡೆಸಿದ ಸರ್ಕಾರ ವಿಫವಾದರೂ ಕೂಡ ಕಾನೂನುಗಳು ರೈತ ಪರ ಎಂದು ಸಮರ್ಥಿಸಿಕೊಂಡಿದೆ.
ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿರುವ ಗಾಜಿಪುರದಲ್ಲಿ ಪ್ರತಿಭಟನಾಕಾರರನ್ನು ಟಿಕಾಯತ್ ಮುನ್ನಡೆಸುತ್ತಿದ್ದಾರೆ ಮತ್ತು ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ತಮ್ಮ ಆಂದೋಲನವನ್ನು ಕೊನೆಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.