ನವದೆಹಲಿ: ಆಮ್ ಆದ್ಮಿ ಪಕ್ಷದ ಆರೋಪಗಳನ್ನು ಆಧಾರರಹಿತ ಎಂದು ತಳ್ಳಿ ಹಾಕಿರುವ ದೆಹಲಿ ಕಾರಾಗೃಹದ ಅಧಿಕಾರಿಗಳು, ಮಾಜಿ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ತಿಹಾರ್ ಸೆಂಟ್ರಲ್ ಜೈಲ್ನ ನಂ. 1 ವಾರ್ಡ್ನಲ್ಲಿ ಇರಿಸಲಾಗಿದ್ದು, ಅಲ್ಲಿ ಯಾವುದೇ ದರೋಡೆಕೋರರಿಲ್ಲ. ಹಾಗೂ ಅಲ್ಲಿ ಅತ್ಯಂತ ಕಡಿಮೆ ಸಂಖ್ಯೆ ಕೈದಿಗಳಿದ್ದಾರೆ ಎಂದು ಹೇಳಿದ್ದಾರೆ. ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಹಾಗೂ ಶಾಸಕ ಸೌರಭ್ ಭಾರದ್ವಾಜ್ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜೈಲು ಆಡಳಿತ ಈ ಸ್ಪಷ್ಟನೆ ಕೊಟ್ಟಿದೆ.
ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಸಿಬಿಐ ಕಸ್ಟಡಿಯಲ್ಲಿದ್ದ ಆಪ್ ನಾಯಕ ಮನೀಶ್ ಸಿಸೋಡಿಯಾ ಅವರಿಗೆ 6 ರಂದು ದೆಹಲಿ ವಿಶೇಷ ನ್ಯಾಯಾಲಯ ಮಾರ್ಚ್ 20 ವರೆಗೆ ನ್ಯಾಯಾಂಗ ಬಂಧನ ವಿಧಿಸಿ, ತಿಹಾರ್ ಜೈಲಿಗೆ ಕಳುಹಿಸಿತ್ತು. ಹೀಗೆ ತಿಹಾರ್ಗೆ ಜೈಲಿಗೆ ಹೋಗಿರುವ ಸಿಸೋಡಿಯಾ ಅವರನ್ನು ಇತರ ಕೈದಿಗಳೊಂದಿಗೆ ಸಾಮಾನ್ಯ ಸೆಲ್‌ನಲ್ಲಿ ಇರಿಸಲಾಗಿದೆ. ಮತ್ತು ಅವರಿಗೆ 'ವಿಪಸ್ಸನಾ' ಸೆಲ್ ಅನ್ನು ನಿರಾಕರಿಸಲಾಗಿದೆ ಎಂದು ಭಾರದ್ವಾಜ್ ಇಂದು ಬೆಳಗ್ಗೆ ಹೇಳಿಕೆ ನೀಡಿದ್ದರು.
ಮನೀಶ್ ಸಿಸೋಡಿಯಾ ಅವರನ್ನು ಜೈಲಿನ ವಿಪಸ್ಸನಾ ಸೆಲ್‌ನಲ್ಲಿ ಇರಿಸುವಂತೆ ಮನವಿ ಮಾಡಲಾಗಿತ್ತು ಮತ್ತು ಅದನ್ನು ನ್ಯಾಯಾಲಯ ಕೂಡ ಅನುಮೋದಿಸಿದೆ. ಆದರೆ, ನ್ಯಾಯಾಲಯದ ಅನುಮೋದನೆ ಹೊರತಾಗಿಯೂ ಸಿಸೋಡಿಯಾ ಅವರನ್ನು ಜೈಲು ಸಂಖ್ಯೆ 1 ರಲ್ಲಿ ಅಪರಾಧಿಗಳೊಂದಿಗೆ ಇರಿಸಲಾಗಿದೆ. ಇದು ಕೆಲವು ಭಯಾನಕ ಅಪರಾಧಿಗಳು ಮತ್ತು ಕೊಲೆಗಾರರಿರುವ ಸೆಲ್ ಆಗಿದೆ. ತಮ್ಮ ಪಕ್ಷದ ನಾಯಕನನ್ನು ಕೊಲ್ಲಲು ಬಿಜೆಪಿ ಸಂಚು ನಡೆಸುತ್ತಿದೆ ಎಂದು ಭಾರದ್ವಾಜ್ ಆರೋಪಿಸಿದ್ದರು. ಇದಕ್ಕೆ ಕೇಂದ್ರ ಉತ್ತರ ನೀಡಬೇಕು ಎಂದು ಭಾರದ್ವಾಜ್ ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜೈಲು ಅಧಿಕಾರಿಗಳು, 'ಮನೀಶ್ ಸಿಸೋಡಿಯಾ ಅವರ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಪ್ರತ್ಯೇಕ ವಾರ್ಡ್ನಲ್ಲಿ ಇರಿಸಲಾಗಿದೆ. ದರೋಡೆಕೋರರಿಲ್ಲದ, ಮತ್ತು ಜೈಲಿನೊಳಗೆ ಉತ್ತಮ ನಡವಳಿಕೆ ನಿರ್ವಹಿಸುವ ಕನಿಷ್ಠ ಸಂಖ್ಯೆಯ ಕೈದಿಗಳಿರುವ ಸೆಲ್‌ನಲ್ಲಿ ಅವರನ್ನು ಇರಿಸಲಾಗಿದೆ. ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಪ್ರತ್ಯೇಕ ಸೆಲ್ ನೀಡಿರುವುದರಿಂದ ಇಲ್ಲಿ ಅವರು ಯಾವುದೇ ತೊಂದರೆಯಿಲ್ಲದೇ ಧ್ಯಾನ ಮಾಡಲು ಅಥವಾ ಇತರ ಚಟುವಟಿಕೆಗಳನ್ನು ಮಾಡಲು ಸಾಧ್ಯ ಎಂದು ತಿಳಿಸಿದರು.