ನವದೆಹಲಿ:ಜೈಲಾಧಿಕಾರಿಗಳ ಕೈಗೆ ಸಿಕ್ಕಿ ಬೀಳಬಹುದೆಂಬ ಭಯದಲ್ಲಿ ಕೈದಿಯೋರ್ವ ಮೊಬೈಲ್ ಫೋನ್ ನುಂಗಿರುವ ಘಟನೆ ತಿಹಾರ್ ಜೈಲಿನಲ್ಲಿ ನಡೆದಿದೆ. ಆತನನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೈದಿಗಳ ಬಳಿ ಮೊಬೈಲ್ ಸೇರಿದಂತೆ ಇತರೆ ನಿಷೇಧಿತ ವಸ್ತುಗಳಿರುವ ಕುರಿತು ತನಿಖೆ ನಡೆಸಿದಾಗ ಕೈದಿಯೋರ್ವ ಈ ರೀತಿ ನಡೆದುಕೊಂಡಿದ್ದಾನೆ. ತನ್ನ ಬಳಿಯಿದ್ದ ಸಣ್ಣ ಮೊಬೈಲ್ ಫೋನ್ ಅನ್ನು ಆತ ತಕ್ಷಣ ನುಂಗಿದ್ದಾನೆ. ಜೈಲಿನ ವಾರ್ಡನ್ ಹಾಗೂ ಇತರೆ ಕೈದಿಗಳೆದುರು ಈ ಘಟನೆ ನಡೆಯಿತು. ತಕ್ಷಣವೇ ಆತನನ್ನು ಜೈಲಿನಲ್ಲಿರುವ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಲಾಗಿದ್ದು, ಬಳಿಕ ಆತನ ಆರೋಗ್ಯ ಮತ್ತಷ್ಟು ಹದಗೆಟ್ಟಿರುವ ಕಾರಣ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.