ನೈನಿತಾಲ್ (ಉತ್ತರಾಖಂಡ): ಮೂವರು ಮಹಿಳೆಯರು ಹಾಗೂ ಅನೇಕ ಜಾನುವಾರುಗಳನ್ನು ಬಲಿ ಪಡೆದಿದ್ದ ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಭಿಮ್ತಾಲ್ ನೌಕುಚಿಯಾತಲ್ ಕಾಡು ಪ್ರದೇಶದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಬೀಸಿದ ಬಲೆಗೆ ಹುಲಿ ಬಿದ್ದಿದೆ. ಹುಲಿಯನ್ನು ರಕ್ಷಿಸಿ ರಾಣಿಭಾಗ್ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.
ಡಿ. 7 ರಿಂದ ಗ್ರಾಮಸ್ಥರ ನಿದ್ದೆ ಕೆಡಿಸಿದ್ದ ಹುಲಿ, ನೈನಿತಾಲ್ನ ಭಿಮತಾಲ್ ಪ್ರದೇಶದಲ್ಲಿ ಮೂವರು ಮಹಿಳೆಯರನ್ನು ಹಾಗೂ ಅನೇಕ ಜಾನುವಾರುಗಳನ್ನು ಬಲಿ ಪಡೆದಿತ್ತು. ಜನರು ಊರಲ್ಲಿ ಭಯದಲ್ಲೇ ಓಡಾಡುವಂತಾಗಿತ್ತು. ನಿನ್ನೆ ಕೂಡ ಒಂದು ಹಸುವನ್ನು ಬೇಟೆಯಾಡಿದೆ. ನಂತರ ತಪ್ಪಿಸಿಕೊಂಡು ಜಂಗಾಲಿಯಾ ಗ್ರಾಮದಲ್ಲಿ ನೌಕಚಿಯಾತಲ್ನ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಜಂಗಾಲಿಯಾ ಗ್ರಾಮದಲ್ಲಿ ಕಾಣಿಸಿಕೊಂಡಿರುವ ವಿಷಯ ತಿಳಿದ ಅರಣ್ಯ ಇಲಾಖೆಯ ಪಾರುಗಾಣಿಕಾ ತಂಡವು ಸೋಮವಾರ ರಾತ್ರಿ ಶೋಧಾ ಕಾರ್ಯಾಚರಣೆ ನಡೆಸಿದೆ.
ಹುಲಿ ಬೇಟೆಯಾಡಿದ್ದ ಹಸುವನ್ನೇ ದಾಳವಾಗಿ ಬಳಸಿದ ತಂಡ ಹಸುವನ್ನು, ಹುಲಿಗೆ ಅರಿವಳಿಕೆ ಮದ್ದು ನೀಡಲು ನಿಗದಿಪಡಿಸಿದ್ದ ಸ್ಥಳದಲ್ಲಿ ಇರಿಸಿದ್ದಾರೆ. ತನ್ನ ಬೇಟೆಗಾಗಿ ಹುಲಿ ಮತ್ತೆ ಬರಬಹುದು ಎಂದು ಕಾದು ಕುಳಿತಿದ್ದಾರೆ. ಹಲವಾರು ಗಂಟೆಗಳ ಕಾಲ ತಂಡದ ತಾಳ್ಮೆ ಪರೀಕ್ಷೆ ಮಾಡಿದ್ದ ಹುಲಿ ರಾತ್ರಿ 12 ಗಂಟೆ ವೇಳೆಗೆ ಹಸುವಿನ ಬಳಿ ಬಂದಿದೆ. ಅದೇ ವೇಳೆ ಸಿಬ್ಬಂದಿ ಹುಲಿಗೆ ಅರಿವಳಿಕೆ ಮದ್ದು ಶೂಟ್ ಮಾಡಿದ್ದಾರೆ. ಡಾರ್ಟ್ ಮಾಡಿದ ನಂತರವೂ ಹುಲಿ ಕಾಡಿನಲ್ಲಿ ಓಡಿದೆ. ನಂತರ ಪಾರುಗಾಣಿಕಾ ತಂಡ ನಿಧಾನವಾಗಿ ಕಾಡಿನೊಳಗಡೆ ಹುಡುಕಾಡಿದ್ದಾರೆ. ಅಂತಿಮವಾಗಿ ಮುಖ್ಯರಸ್ತೆಯಿಂದ 3 ಕಿಲೋಮೀಟರ್ ಕೆಳಗೆ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ದೊರಕಿದೆ.