ಪಿಲಿಭಿತ್ (ಉತ್ತರಪ್ರದೇಶ) :ಹುಲಿಯೊಂದು ಉತ್ತರ ಪ್ರದೇಶದ ಹಳ್ಳಿಯ ಜನರನ್ನು ರಾತ್ರಿಯಿಡೀ ಎಚ್ಚರವಾಗಿರುವಂತೆ ಮಾಡಿದೆ. ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗಿದ ವ್ಯಾಘ್ರ ಮನೆಯೊಂದರ ಗೋಡೆಯ ಮೇಲೆ ಹತ್ತಿ ಮಲಗಿದೆ. ಬೆಳಗ್ಗೆವರೆಗೂ ಅಲ್ಲಿಯೇ ಮಲಗಿದೆ. ಇದನ್ನು ಕಂಡ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸಿಬ್ಬಂದಿ ಅದನ್ನು ಹಿಡಿದು ರಕ್ಷಿಸಿದ್ದಾರೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಹುಲಿ ರಕ್ಷಿತಾರಣ್ಯವಾಗಿರುವ ಪಿಲಿಭಿತ್ ಪ್ರದೇಶದಲ್ಲಿ ಹುಲಿಗಳ ಓಡಾಟ ಸಹಜವಾಗಿದೆ. ಈಗಾಗಲೇ ಹಲವು ಜನರ ಮೇಲೆ ದಾಳಿ ಮಾಡಿದ ಪ್ರಕರಣಗಳೂ ನಡೆದಿವೆ. ಮಂಗಳವಾರ ಮಧ್ಯರಾತ್ರಿಯಲ್ಲಿ ವ್ಯಾಘ್ರವೊಂದು ಗ್ರಾಮಕ್ಕೆ ಬಂದು ರೈತನ ಮನೆಯೊಂದರ ಗೋಡೆಯ ಮೇಲೆ ಮಲಗಿದೆ. ಇದನ್ನು ಕಂಡ ನಾಯಿಗಳು ಬೊಗಳಲಾರಂಭಿಸಿವೆ. ರೈತ ಹೊರಬಂದು ನೋಡಿದಾಗ ಹುಲಿ ಕಂಡು ಬೆದರಿದ್ದಾನೆ. ತಕ್ಷಣವೇ ಈ ಸುದ್ದಿ ಗ್ರಾಮದ ತುಂಬೆಲ್ಲಾ ಹರಡಿದೆ.
ರಾತ್ರಿಪೂರ್ತಿ ಗೋಡೆಯ ಮೇಲೆ ಮಲಗಿದ ವ್ಯಾಘ್ರ:ಹುಲಿಯನ್ನು ಓಡಿಸಲು ಜನರು ಟಾರ್ಚ್ನ ಬೆಳಕನ್ನು ಹುಲಿಯ ಕಡೆಗೆ ಬಿಟ್ಟಿದ್ದಾರೆ. ಜೋರಾದ ಸದ್ದು ಕೂಡ ಮಾಡಿದ್ದಾರೆ. ಏನೇ ಮಾಡಿದರೂ ಹುಲಿ ಮಾತ್ರ ಅಲ್ಲಿಂದ ಕದಲಲಿಲ್ಲ. ಇದರಿಂದ ಸುಸ್ತಾದ ಜನರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸೂರ್ಯೋದಯವಾದರೂ, ಎದ್ದೇಳದ ಹುಲಿ ಗೋಡೆಯ ಮೇಲೆ ಹಾಗೆಯೇ ಮಲಗಿತ್ತು. ಜನರ ಇದನ್ನು ನೋಡಲು ಸುತ್ತುವರಿದಿದ್ದರು. ಬಳಿಕ ಅದು ಎದ್ದು ನಿಂತು ಸುತ್ತಲೂ ನೋಡಿ ಮತ್ತೆ ಅದೇ ಜಾಗದಲ್ಲಿ ಮಲಗಿದೆ.