ಕರ್ನಾಟಕ

karnataka

ETV Bharat / bharat

ಉತ್ತರಪ್ರದೇಶದ ಜಮೀನಿನಲ್ಲಿ ಹುಲಿ ಶವ ಪತ್ತೆ: ವಿಷಪ್ರಾಶನದಿಂದ ಸಾವು ಶಂಕೆ - ನಾಗರಹೊಳೆಯಲ್ಲಿ ಹುಲಿಗೆ ಗಾಯ

ಉತ್ತರಪ್ರದೇಶದಲ್ಲಿ ಹುಲಿಯೊಂದು ಸಾವನ್ನಪ್ಪಿದೆ. ವಿಷಪ್ರಾಶನದಿಂದ ಮೃತಪಟ್ಟಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಶವ ಪರೀಕ್ಷೆ ನಡೆಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.

ಉತ್ತರಪ್ರದೇಶದ ಜಮೀನಿನಲ್ಲಿ ಹುಲಿ ಶವ ಪತ್ತೆ
ಉತ್ತರಪ್ರದೇಶದ ಜಮೀನಿನಲ್ಲಿ ಹುಲಿ ಶವ ಪತ್ತೆ

By

Published : Apr 23, 2023, 10:35 AM IST

ಲಖೀಂಪುರ ಖೇರಿ (ಉತ್ತರ ಪ್ರದೇಶ):ದೇಶದಲ್ಲಿ ಹುಲಿಗಳ ಸಂತತಿ ಹೆಚ್ಚುತ್ತಿರುವುದು ಸಂತಸದ ಸಂಗತಿಯಾಗಿದೆ. ಇದರ ಮಧ್ಯೆಯೇ ನೋವಿನ ವಿಚಾರವೊಂದು ಹೊರಬಿದ್ದಿದೆ. ಉತ್ತರಪ್ರದೇಶದ ಲಖೀಂಪುರ ಖೇರಿ ಅರಣ್ಯ ಪ್ರದೇಶದಲ್ಲಿ ವಿಷಪ್ರಾಶನದಿಂದಾಗಿ ಹುಲಿ ಪ್ರಾಣ ಕಳೆದುಕೊಂಡಿದೆ. ಅಲ್ಲದೇ, ಹುಲಿಯ ಹೊಟ್ಟೆಯೊಳಗೆ ಹರಿತವಾದ ಮೂಳೆಯೊಂದು ಚುಚ್ಚಿದ್ದು ಗೊತ್ತಾಗಿದೆ. ಹುಲಿಯ ಶವ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ಬಳಿಕ ಹುಲಿ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

ಲಖೀಂಪುರ ಖೇರಿ ಅರಣ್ಯ ಪ್ರದೇಶದಿಂದ ಹೊರಬಂದಿರುವ 2 ವರ್ಷದ ಹುಲಿ ಜಮೀನಿನ ಪಕ್ಕದಲ್ಲಿ ಮೃತಪಟ್ಟಿದೆ. ವಿಷಪ್ರಾಶನದಿಂದಾಗಿ ಇದು ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಉಪನಿರ್ದೇಶಕ ಸುಂದರೇಶ್‌ ಶಂಕಿಸಿದ್ದಾರೆ. ಯಾರೋ ವಿಷ ಹಾಕಿರುವ ಸಾಧ್ಯತೆ ಇದೆ. ಹುಲಿಯ ಪತ್ತೆಗಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ, ಅದು ಇರುವ ಸ್ಥಳದ ಬದಲಾಗಿ, ಜಮೀನನಲ್ಲಿ ಬಂದು ಸಾವನ್ನಪ್ಪಿದೆ. ಹುಲಿ ಸಾವು ಘಟನೆ ಸೂಕ್ಷ್ಮ ವಿಚಾರ. ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ ಎಂದು ತಿಳಿಸಿದರು.

ಹೊಟ್ಟೆಗೆ ಚುಚ್ಚಿಕೊಂಡ ಚೂಪಾದ ಮೂಳೆ:ಹುಲಿಗೆ ಕೇವಲ 2 ವರ್ಷ ವಯಸ್ಸಾಗಿದೆ. ಅದರ ವಯಸ್ಸನ್ನು ಹಲ್ಲುಗಳೇ ಸೂಚಿಸುತ್ತವೆ. ಶವವನ್ನು ಪರೀಕ್ಷಿಸಿದ ನಂತರ ಅದು ಅನಾರೋಗ್ಯದಿಂದ ಬಳಲುತ್ತಿರುವುದು ಕಂಡುಬಂತು. ಹೊಟ್ಟೆಗೆ ಆಹಾರವಿಲ್ಲದೇ ನಿತ್ರಾಣವಾಗಿದೆ. ಅಲ್ಲದೆ, ಚೂಪಾದ ಮೂಳೆಯೊಂದು ಅದರ ಹೊಟ್ಟೆಗೆ ಚುಚ್ಚಿಕೊಂಡಿದೆ. ಇದು ಸೆಪ್ಟಿಸೆಮಿಯಾಕ್ಕೆ ಕಾರಣವಾಗಿದೆ. ಬಹುಶಃ ಅದರ ಸಾವಿಗೆ ಇದೇ ಕಾರಣ ಇರಬಹುದು ಎಂದು ಅಧಿಕಾರಿಯೊಬ್ಬರು ಹೇಳಿದರು.

ಆದರೆ, ಸಾವಿಗೆ ನಿಖರ ಕಾರಣ ಏನೆಂದು ತಿಳಿಯಲು ಶವಪರೀಕ್ಷೆ ವರದಿಗಾಗಿ ಕಾಯಲಾಗುತ್ತಿದೆ. ನಮ್ಮ ಡೇಟಾಬೇಸ್‌ನಲ್ಲಿ ಹುಲಿಯ ಪಟ್ಟೆಗಳನ್ನು ಪರಿಶೀಲಿಸುತ್ತಿದ್ದೇವೆ. ಅದು ಕಿಶನ್‌ಪುರ ಶ್ರೇಣಿ ಅಥವಾ ಮೈಲಾನಿ ಶ್ರೇಣಿಯ ಕಾಡುಗಳಿಂದ ವಲಸೆ ಬಂದಿರಬಹುದು ಎಂದು ನಿರೀಕ್ಷಿಸಲಾಗಿದೆ. ಕಾಡಿನಿಂದ ಹೊರಬಂದ ಕೆಲವೇ ನಿಮಿಷಗಳಲ್ಲಿ ಹುಲಿ ಸಾವನ್ನಪ್ಪಿರುವುದು, ಅದರ ಸಾವಿನ ಕಾರಣದ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ ಎಂಬುದು ಅರಣ್ಯಾಧಿಕಾರಿ ಸುಂದರೇಶ್‌ ಮಾತು.

ನಾಗರಹೊಳೆಯಲ್ಲಿ ಹುಲಿಗೆ ಗಾಯ:ಇತ್ತೀಚೆಗೆನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ.ಕುಪ್ಪೆ ಅರಣ್ಯದಲ್ಲಿ ಎರಡು ಹುಲಿಗಳ ಮಧ್ಯೆ ನಡೆದ ಕಾದಾಟದಲ್ಲಿ ಹೆಣ್ಣು ಹುಲಿ ಗಾಯಗೊಂಡಿತ್ತು. ಸಾಕಾನೆಯ ನೆರವು ಪಡೆದು ಗಾಯಗೊಂಡ ಹುಲಿಗೆ ಚಿಕಿತ್ಸೆ ನೀಡಿ ಬಳಿಕ ಅದನ್ನು ಅರಣ್ಯಪ್ರದೇಶಕ್ಕೆ ಬಿಡಲಾಗಿತ್ತು. ಹೆಚ್​​.ಡಿ.ಕೋಟೆ ತಾಲೂಕಿನ ನಾಗರಹೊಳೆ ವ್ಯಾಪ್ತಿಯ ಡಿ.ಬಿ.ಕುಪ್ಪೆ ವಲಯದಲ್ಲಿ ಗಾಯಗೊಂಡ ಹುಲಿ ಕುಂಟುತ್ತಾ ನಡೆದಾಡುತ್ತಿತ್ತು. ಇದನ್ನು ಕಂಡ ಗಸ್ತು ಪಡೆ ಸಿಬ್ಬಂದಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಚಿಕಿತ್ಸೆ ಕೊಡಿಸಿದ್ದರು.

ದೇಶದ ಹುಲಿಗಳ ಸಂಖ್ಯೆ ಬಿಡುಗಡೆ:ಈಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ದೇಶದ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಿದರು. 2022ರ ವರದಿಯಂತೆ ದೇಶದಲ್ಲಿ ಹುಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜಾಸ್ತಿಯಾಗಿದೆ. 2022ರಲ್ಲಿ ದೇಶಾದ್ಯಂತ 3167 ಹುಲಿಗಳಿವೆ. 2006ರಲ್ಲಿ 1411, 2010 ರಲ್ಲಿ 1706, 2014 ರಲ್ಲಿ 2226, 2018ರಲ್ಲಿ 2967 ಹುಲಿಗಳಿದ್ದವು. ಕಳೆದ 10 ವರ್ಷಗಳಲ್ಲಿ ಟೈಗರ್​ಗಳ ಸಂಖ್ಯೆ ಶೇ.75 ರಷ್ಟು ಏರಿಕೆಯಾಗಿದೆ.

ಓದಿ:ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ

ABOUT THE AUTHOR

...view details